ನವದೆಹಲಿ: ಹಿಂಗಾರು ಹಂಗಾಮಿನ ಆರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕೇಂದ್ರ ಸರ್ಕಾರವು ಗರಿಷ್ಠ ಶೇಕಡ 9ರವರೆಗೆ ಹೆಚ್ಚಿಸಿದೆ. ದೇಶಿ ಉತ್ಪಾದನೆ ಹೆಚ್ಚಿಸುವುದು ಹಾಗೂ ರೈತರ ಆದಾಯ ಹೆಚ್ಚಿಸುವುದು ಕೂಡ ಈ ತೀರ್ಮಾನದ ಹಿಂದಿನ ಉದ್ದೇಶ.
ಗೋಧಿಗೆ ನೀಡುವ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹ 110ರಷ್ಟು ಹೆಚ್ಚಿಸಲಾಗಿದೆ. ಈಗ ಗೋಧಿಗೆ ಕ್ವಿಂಟಲ್‌ಗೆ ₹ 2,125 ಬೆಂಬಲ ಬೆಲೆ ಸಿಗಲಿದೆ. ಈ ಹೆಚ್ಚಳವು 2023–24ನೇ ಮಾರುಕಟ್ಟೆ ವರ್ಷದ ಹಿಂಗಾರು ಬೆಳೆಗಳಿಗೆ ಅನ್ವಯಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಈ ತೀರ್ಮಾನ ಕೈಗೊಂಡಿದೆ.
ಸಂಪುಟದ ತೀರ್ಮಾನವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು. ಬೆಂಬಲ ಬೆಲೆ ಹೆಚ್ಚಳದಿಂದ ಆಹಾರ ಹಣದುಬ್ಬರ ಹೆಚ್ಚಾಗಬಹುದೇ ಎಂಬ ಪ್ರಶ್ನೆಗೆ ಅವರು, ದೇಶದಲ್ಲಿ ಹಣದುಬ್ಬರ ಪ್ರಮಾಣವು ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.