ADVERTISEMENT

ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ | ನೋ–ಫ್ಲೈ ಪಟ್ಟಿಗೆ ಸರ್ಕಾರ ಚಿಂತನೆ: ನಾಯ್ಡು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:06 IST
Last Updated 21 ಅಕ್ಟೋಬರ್ 2024, 16:06 IST
ಕೆ.ರಾಮಮೋಹನ್‌– ಪಿಟಿಐ ಚಿತ್ರ
ಕೆ.ರಾಮಮೋಹನ್‌– ಪಿಟಿಐ ಚಿತ್ರ   

ನವದೆಹಲಿ: ವಿಮಾನಯಾನ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಹಾಕುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸಲು ಮತ್ತು ಅಪರಾಧಿಗಳನ್ನು ‘ನೋ–ಫ್ಲೈ’ ಪಟ್ಟಿಗೆ ಸೇರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಸೋಮವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದಲ್ಲಿ ಸುಮಾರು 100 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರ  ಸೂಕ್ತ ಕಾನೂನುಗಳನ್ನು ಜಾರಿಗೆ ತರಲು ಯೋಜಿಸಿದೆ ಎಂದು ಅವರು ಹೇಳಿದರು.


‘ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಅತಿಮುಖ್ಯವಾಗಿದೆ’ ಎಂದು ಒತ್ತಿಹೇಳಿರುವ ನಾಯ್ಡು, ಇತ್ತೀಚಿನ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಅವೆಲ್ಲವೂ ಹುಸಿ ಕರೆಗಳು ಎನ್ನುವುದು ಖಚಿತವಾಗಿದೆ. ಆದರೆ, ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ನಿಗದಿಪಡಿಸಿದ ಶಿಷ್ಟಾಚಾರವನ್ನು ಅಧಿಕಾರಿಗಳು ಅನುಸರಿಸುತ್ತಿದ್ದಾರೆ. ಪ್ರಯಾಣಿಕರಿಗೆ ಉಂಟಾಗುವ ಅನನುಕೂಲ ತಗ್ಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ADVERTISEMENT

ಬೆದರಿಕೆ ಸಂದೇಶಗಳು ಮತ್ತು ಹುಸಿ ಬೆದರಿಕೆ ಸಂದೇಶಗಳನ್ನು ನಿಭಾಯಿಸಲು ನಾಗರಿಕ ವಿಮಾನಯಾನ ಸಚಿವಾಲಯವು ಸರಣಿ ಸಭೆಗಳನ್ನು ನಡೆಸಿದ್ದು, ಎರಡು ವಿಷಯಗಳಲ್ಲಿ ಕೆಲವು ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಸ್ತಾಪಿಸಿದೆ ಎಂದು ಅವರು ಹೇಳಿದರು.

ಇದರಲ್ಲಿ ಮೊದಲನೆಯದಾಗಿ, ವಿಮಾನ ಭದ್ರತಾ ನಿಯಮಗಳಿಗೆ ತಿದ್ದುಪಡಿ ತರುವುದು, ಎರಡನೆಯದು; ನಾಗರಿಕ ವಿಮಾನ ಸುರಕ್ಷತೆಗೆ ಭಂಗ ತರುವ ಕಾನೂನು ವಿರೋಧಿ ಚಟುವಟಿಕೆ ನಿಗ್ರಹ ಕಾಯ್ದೆ –1982ಕ್ಕೆ ತಿದ್ದುಪಡಿ ತರುವ ಕುರಿತದ್ದಾಗಿದೆ. ಇಂತಹ ತಿದ್ದುಪಡಿಗಳಿಂದ, ಬೆದರಿಕೆ ಸಂದೇಶ ಕಳುಹಿಸುವವರನ್ನು ನೋ–ಫ್ಲೈ ಪಟ್ಟಿಗೆ ಸೇರಿಸಲು ಮತ್ತು ಗಂಭೀರ ಅಪರಾಧವಾಗಿ ಪರಿಗಣಿಸುವುದರಿಂದ ಸಂದೇಶ ಕಳುಹಿಸಿದವರನ್ನು ವಾರಂಟ್‌ ಇಲ್ಲದೇ ಬಂಧಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಇತ್ತೀಚಿನ ಘಟನೆಗಳ ಮಧ್ಯೆ, ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್) ಕೂಡ ವಿಮಾನಗಳಿಗೆ ಬಂದಿರುವ ಬಾಂಬ್ ಬೆದರಿಕೆಯ ಸಂದೇಶಗಳ ಕುರಿತು ಗೃಹ ಸಚಿವಾಲಯದೊಂದಿಗೆ ನಿರಂತರ ಸಂವಹನ ನಡೆಸುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಎಲ್ಲ ಪಾಲುದಾರರೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.