ನವದೆಹಲಿ: ಕೋವಿಡ್–19 ಚಿಕಿತ್ಸೆಯಲ್ಲಿ ರೆಮ್‌ಡಿಸಿವಿರ್ ಅನ್ನು ತರ್ಕಬದ್ಧವಾಗಿ ಬಳಸಬೇಕೆಂದು ಸರ್ಕಾರ ಸೋಮವಾರ ಸಲಹೆ ನೀಡಿದೆ.
ರೋಗಿಗೆ ನೇರವಾಗಿ ಚಿಕಿತ್ಸೆ ನೀಡುವ ಹಿರಿಯ ವೈದ್ಯರು ಮಾತ್ರ ಈ ಜೀವ ರಕ್ಷಕ ಔಷಧಿ ಬಳಸಲು ಸೂಚಿಸಬೇಕು ಎಂದು ಅದು ಒತ್ತಿಹೇಳಿದೆ.
ಈ ಔಷಧಿಯನ್ನು ಆಸ್ಪತ್ರೆಗಳು ಮಾತ್ರ ಒದಗಿಸಬೇಕು ಮತ್ತು ರೋಗಿಯ ಸಂಬಂಧಿಕರನ್ನು ಹೊರಗಿನಿಂದ ಖರೀದಿಸಿ ತರುವಂತೆ ಸೂಚಿಸಬಾರದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ರೆಮ್‌ಡಿಸಿವಿರ್‌ನ ದುರುಪಯೋಗವನ್ನು ತಡೆಯಲು ಮುಂದಾಗಿರುವ ಸರ್ಕಾರ, ತುರ್ತು ಸಮಯದಲ್ಲಿ ಈ ಔಷಧಿಯನ್ನು ಸಲಹೆ ಮಾಡಲು ಅಥವಾ ನೀಡಲು ಬಯಸಿದರೆ, ಕರ್ತವ್ಯನಿರತ ವೈದ್ಯರು ಹಿರಿಯ ಅಧ್ಯಾಪಕ ಸದಸ್ಯ, ತಜ್ಞ ಅಥವಾ ಉಸ್ತುವಾರಿ ಘಟಕದೊಂದಿಗೆ ದೂರವಾಣಿ ಸಮಾಲೋಚನೆ ನಡೆಸಬೇಕು, ನಂತರ ಅದನ್ನು ರೋಗಿಗೆ ನೀಡಬೇಕು ಎಂದು ಸರ್ಕಾರ ಶಿಫಾರಸು ಮಾಡಿದೆ. ಅಲ್ಲದೇ ಆ ಆದೇಶ ಅಥವಾ ಸಲಹೆಯನ್ನು ಸಂಬಂಧಿಸಿದ ಕರ್ತವ್ಯನಿರತ ವೈದ್ಯರ ಹೆಸರು, ಸಹಿ ಮತ್ತು ಸೀಲಿನೊಂದಿಗೆ ಆಸ್ಪತ್ರೆಯ ಕಡತದಲ್ಲಿ ದಾಖಲಿಸಬೇಕು ಎಂದು ಸೂಚಿಸಿದೆ.
ಸರ್ಕಾರ ನೀಡಿರುವ ಸಲಹೆಯ ಪ್ರಕಾರ, ಪ್ರತಿ ಆಸ್ಪತ್ರೆಯು ವಿಶೇಷ ಔಷಧ ಸಮಿತಿಯನ್ನು (ಎಸ್‌ಡಿಸಿ) ರಚಿಸಬೇಕಾಗಿದ್ದು, ನಿಯತಕಾಲಿಕವಾಗಿ ರೆಮ್‌ಡಿಸಿವಿರ್ ಬಳಕೆಯನ್ನು ಪರಿಶೀಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.