ADVERTISEMENT

ವಿಪಕ್ಷ ನಾಯಕರ ಐಫೋನ್ ಹ್ಯಾಕ್ ಯತ್ನ: ತನಿಖೆಗೆ ಕೇಂದ್ರ ಸರ್ಕಾರ ಆದೇಶ

ಪಿಟಿಐ
Published 31 ಅಕ್ಟೋಬರ್ 2023, 11:37 IST
Last Updated 31 ಅಕ್ಟೋಬರ್ 2023, 11:37 IST
<div class="paragraphs"><p> ಸಾಂದರ್ಭಿಕಚಿತ್ರ</p></div>

ಸಾಂದರ್ಭಿಕಚಿತ್ರ

   

ನವದೆಹಲಿ: ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳಿಂದ ಐ‍ಫೋನ್‌ ಅನ್ನು ಹ್ಯಾಕ್ ಮಾಡಿ, ಮಾಹಿತಿ ಕದಿಯುವ ಪ್ರಯತ್ನಗಳಾಗುತ್ತಿವೆ ಎಂದು ಆ್ಯಪಲ್‌ ಕಂಪನಿ ವಿರೋಧ ಪಕ್ಷಗಳ ನಾಯಕರಿಗೆ ಕಳುಹಿಸಿರುವ ಸಂದೇಶದ ಬಗ್ಗೆ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌, ‘ನಾಗರಿಕರ ಖಾಸಗಿತನ ಹಾಗೂ ಭದ್ರತೆಯನ್ನು ರಕ್ಷಿಸುವ ಹೊಣೆ ಸರ್ಕಾರದ್ದು. ಈ ಸಂದೇಶದ ಮೂಲ ತಿಳಿಯಲು ನಾವು ತನಿಖೆ ನಡೆಸುತ್ತೇವೆ’ ಎಂದು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಮಾಹಿತಿ ಹಾಗೂ ವ್ಯಾಪಕ ಊಹಾಪೋಹಗಳು ಕೇಳಿ ಬಂದಿದ್ದರಿಂದ, ಆಪಾದಿತ ಸರ್ಕಾರಿ ಪ್ರಾಯೋಜಿತ ದಾಳಿಯ ಬಗ್ಗೆ ನೈಜ ಹಾಗೂ ನಿಖರ ಮಾಹಿತಿ ನೀಡಿ ತನಿಖೆಗೆ ಕೈಜೋಡಿಸಬೇಕು ಎಂದು ನಾವು ಆ್ಯಪಲ್‌ ಕಂಪನಿಯನ್ನು ಕೇಳಿಕೊಂಡಿದ್ದೇವೆ ಎಂದು ವೈಷ್ಣವ್‌ ಹೇಳಿದ್ದಾರೆ.

ರಾಷ್ಟ್ರೀಯ ನೋಡಲ್ ಏಜೆನ್ಸಿ Cert-In ತನಿಖೆ ನಡೆಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನು ಸರ್ಕಾರಿ ‍‍ಪ್ರಾಯೋಜಿತ ದಾಳಿಯ ಬಗ್ಗೆ ವಿರೋಧ ‍ಪಕ್ಷಗಳು ಮಾಡಿರುವ ಆರೋಪದ ಬಗ್ಗೆ ಭೋಪಾಲ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ವೈಷ್ಣವ್, ಟೀಕೆಗಳ ಮೂಲಕ ವಿರೋಧ ಪಕ್ಷಗಳು ಗೊಂದಲದ ರಾಜಕೀಯ ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಅಭಿವೃದ್ಧಿಯನ್ನು ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ 150 ದೇಶಗಳ ಬಳಕೆದಾರರಿಗೆ ಆ್ಯಪಲ್ ಇಂಥ ಸಂದೇಶ ರವಾನೆ ಮಾಡಿದೆ ಎಂದಿದ್ದಾರೆ.

‘ಆ್ಯಪಲ್‌ನಿಂದ ಸಂದೇಶ ಬಂದಿರುವ ಬಗ್ಗೆ ಕೆಲವು ಸಂಸದರು ಹಾಗೂ ಇನ್ನಿತರರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಕಳವಳಕಾರಿಯಾಗಿದೆ. ಅವರಿಗೆ ಬಂದ ಸಂದೇಶದಲ್ಲಿ ಸರ್ಕಾರಿ ಪ್ರಾಯೋಜಿತ ದಾಳಿ ಎಂದು ಉಲ್ಲೇಖಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸಂಬಂಧ ಆ್ಯಪಲ್ ನೀಡಿದ ಮಾಹಿತಿ ಅಸ್ಪಷ್ಟವಾಗಿದೆ’ ಎಂದು ಹೇಳಿದ್ದಾರೆ.

ಇದು ಅಪೂರ್ಣ ಮಾಹಿತಿ ಎಂದು ಆ್ಯಪಲ್ ಹೇಳಿದೆ. ಕೆಲವೊಂದು ಸಂದೇಶಗಳು ತಪ್ಪು ಕೂಡ ಆಗಿರಬಹುದು ಎಂದೂ ಆ್ಯಪಲ್ ಹೇಳಿಕೆಯಲ್ಲಿ ತಿಳಿಸಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.