ADVERTISEMENT

ಕೆಲಸದ ಒತ್ತಡದಿಂದ ಉದ್ಯೋಗಿ ಸಾವು: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 15:44 IST
Last Updated 19 ಸೆಪ್ಟೆಂಬರ್ 2024, 15:44 IST
.
.   

ನವದೆಹಲಿ: ‘ಅರ್ನ್‌ಸ್ಟ್‌ ಆ್ಯಂಡ್‌ ಯಂಗ್‌’ (ಇವೈ) ಕಂಪನಿಯ ಯುವ ಮಹಿಳಾ ಉದ್ಯೋಗಿಯು ಕೆಲಸದ ಒತ್ತಡ, ಶೋಷಣೆ ಮತ್ತು ಅಸುರಕ್ಷಿತ ಪರಿಸರದಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪದ ಕಾರಣ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತನಿಖೆಗೆ ಗುರುವಾರ ಆದೇಶಿಸಿದೆ.

ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಕೊಚ್ಚಿಯ ನಿವಾಸಿ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ (26) ಅವರು ಜುಲೈ 20ರಂದು ಮೃತಪಟ್ಟಿದ್ದರು. ಅತಿಯಾದ ಕೆಲಸದ ಒತ್ತಡದಿಂದ ತನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಅನ್ನಾ ಅವರ ತಾಯಿ ಅನಿತಾ ಅವರು ಕಂಪನಿಗೆ ಪತ್ರ ಬರೆದಿದ್ದು, ಅದು ಬಹಿರಂಗವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅನಿತಾ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕಂಪನಿಯು, ಈ ಸಂಬಂಧ ಪರಿಶೀಲಿಸುತ್ತೇವೆ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಲು ಬಯಸುತ್ತೇವೆ ಎಂದು ತಿಳಿಸಿದೆ.

ADVERTISEMENT

ಈ ಕುರಿತು ‘ಎಕ್ಸ್‌’ ಮಾಡಿರುವ ಕಾರ್ಮಿಕ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ‘ಅನ್ನಾ ಅವರ ನಿಧನದಿಂದ ತೀವ್ರ ದುಃಖಿತಳಾಗಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲಿದ್ದು, ನ್ಯಾಯ ದೊರಕಿಸಲು ಇಲಾಖೆ ಬದ್ಧವಾಗಿದೆ’ ಎಂದು ಭರವಸೆ ನೀಡಿದ್ದಾರೆ.

ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು, ಅನ್ನಾ ಅವರ ಸಾವು ನೋವು ತರಿಸಿದೆ. ಅವರ ತಾಯಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕಾರ್ಮಿಕ ಸಚಿವರಾದ ಮನಸುಖ್‌ ಮಾಂಡವಿಯ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಕೋರುತ್ತೇನೆ ಎಂದಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು, ‘ಅನ್ನಾ ಅವರ ಸಾವು ಮತ್ತು ಅವರ ತಾಯಿಯ ಭಾವನಾತ್ಮಕ ಪತ್ರವು ದೇಶದ ಯುವಕರನ್ನು ಬೆಚ್ಚಿಬೀಳಿಸಿದೆ’ ಎಂದಿದ್ದಾರೆ.

ಯಾವುದೇ ದೇಶದ ಅಭಿವೃದ್ಧಿಗೆ ಕೆಲಸ ಮತ್ತು ಜೀವನದ ನಡುವೆ ಸಮತೋಲನ ಇರಬೇಕು. ಸರ್ಕಾರ ಸೇರಿದಂತೆ ಕಾರ್ಪೊರೇಟ್‌ ಸಂಸ್ಥೆಗಳಲ್ಲಿನ ಪ್ರತಿಯೊಬ್ಬರೂ ಈ ಪತ್ರವನ್ನು ಎಚ್ಚರಿಕೆ ಮತ್ತು ಸಲಹೆ ಎಂದು ಪರಿಗಣಿಸಬೇಕು. ಕೆಲಸದ ವಾತಾವರಣ, ಪರಿಸ್ಥಿತಿ ಸರಿಯಿಲ್ಲದಾಗ, ಉತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಫಲಿತಾಂಶ ಹೇಗೆ ಲಭ್ಯವಾಗುತ್ತದೆ ಎಂದು ಅವರು ‘ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.