ನವದೆಹಲಿ: ಈ ಸಾಲಿನ ‘ಭಾರತೀಯ ವಿಜ್ಞಾನ ಕಾಂಗ್ರೆಸ್’ (ಐಎಸ್‌ಸಿ) ಆಯೋಜನೆ ಮಾಡಲು ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘಕ್ಕೆ (ಐಎಸ್‌ಸಿಎ) ಸರ್ಕಾರವು ಈ ಬಾರಿ ಹಣಕಾಸಿನ ನೆರವು ನೀಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಕಾರ್ಯಕ್ರಮದ ವಸ್ತು ವಿಷಯ ಕುರಿತು ಐಎಸ್‌ಸಿಎ ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ನಡುವೆ ಒಮ್ಮತ ಮೂಡದ ಕಾರಣ ಈ ಬಾರಿ ನೆರವು ನೀಡಲು ಡಿಎಸ್‌ಟಿ ನಿರಾಕರಿಸಿದೆ. ‘2024ರ ಐಎಸ್‌ಸಿ ಕಾರ್ಯಕ್ರಮಕ್ಕೆ ನೆರವು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಡಿಎಸ್‌ಟಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು.
ಇದೇವೇಳೆ, ತನ್ನ ಕಾರ್ಯವ್ಯಾಪ್ತಿಯಲ್ಲಿ ಸರ್ಕಾರವು ಮೂಗು ತೂರಿಸುತ್ತಿದೆ ಎಂದು ಆರೋಪಿಸಿ ಐಎಸ್‌ಸಿಎ ಕೋರ್ಟ್ ಮೆಟ್ಟಿಲೇರಿದೆ.
ವಿಜ್ಞಾನ ಕಾಂಗ್ರೆಸ್‌ಅನ್ನು ಐಎಸ್‌ಸಿಎ ಪ್ರತಿವರ್ಷ ಆಯೋಜಿಸುತ್ತದೆ. ಇದು ಐದು ದಿನಗಳ ಕಾರ್ಯಕ್ರಮವಾಗಿದ್ದು, ಯಾವಾಗಲೂ ಜನವರಿ 3ರಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಡಿಎಸ್‌ಟಿ ₹5 ಕೋಟಿ ಹಣಕಾಸಿನ ನೆರವು ನೀಡುತ್ತಿತ್ತು. ಈ ನೆರವಿನಲ್ಲಿ ಹೆಚ್ಚಿನ ಭಾಗವು ಕಾರ್ಯಕ್ರಮದ ಆತಿಥ್ಯ ವಹಿಸಿಕೊಳ್ಳುವ ಶಿಕ್ಷಣ ಸಂಸ್ಥೆಗೆ ಸಂದಾಯವಾಗುತ್ತಿತ್ತು.
ಈ ವರ್ಷದ ವಿಜ್ಞಾನ ಕಾಂಗ್ರೆಸ್‌ನ ಆತಿಥ್ಯವನ್ನು ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ ವಹಿಸಿಕೊಳ್ಳಬೇಕಿತ್ತು. ಡಿಎಸ್‌ಟಿ ನೆರವು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿ.ವಿಯು ಕಾರ್ಯಕ್ರಮದ ಆಯೋಜನೆಯಿಂದ ಹಿಂದೆ ಸರಿದಿದೆ. ಹೀಗಾಗಿ, ಫೆಬ್ರುವರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ವಿಶ್ವವಿದ್ಯಾಲಯಗಳಿಗೆ ಐಎಸ್‌ಸಿಎ ವೆಬ್‌ಸೈಟ್ ಮೂಲಕ ಆಹ್ವಾನ ನೀಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅರವಿಂದ್ ಸಕ್ಸೇನಾ ತಿಳಿಸಿದ್ದಾರೆ.
ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿ ಸರ್ಕಾರ ಮತ್ತು ಐಎಸ್‌ಸಿಎ ನಡುವೆ ಕಳೆದ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯ ಇದೆ. ವಿಜ್ಞಾನ ಕಾಂಗ್ರೆಸ್‌ಗೆ ಸರಿಸಾಟಿಯಾಗಿ ಸರ್ಕಾರವು, ಭಾರತೀಯ ಅಂತರರಾಷ್ಟ್ರೀಯ ವಿಜ್ಞಾನ ಮೇಳವನ್ನು (ಐಐಎಸ್‌ಎಫ್) 2015ರಿಂದ ಆಯೋಜಿಸುತ್ತಿದೆ.
ಕೋವಿಡ್ ಸಾಂಕ್ರಾಮಿಕದ ಕಾರಣದಿಂದ 2021 ಮತ್ತು 2022ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. 108ನೇ ವಿಜ್ಞಾನ ಕಾಂಗ್ರೆಸ್ ಅನ್ನು ಕಳೆದ ವರ್ಷ ನಾಗ್ಪುರದಲ್ಲಿ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಇದನ್ನು ಉದ್ಘಾಟಿಸಿದ್ದರು.
1914ರಲ್ಲಿ ಮೊದಲ ಬಾರಿ ಈ ಕಾರ್ಯಕ್ರಮವನ್ನು ನಡೆಸಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಪ್ರಧಾನಿಯೇ ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.