ADVERTISEMENT

ಮಿಲಿಟರಿ ಕ್ಯಾಂಟೀನ್‌ಗಳಲ್ಲಿ 1,026 ವಿದೇಶ ವಸ್ತುಗಳ ಮಾರಾಟ ನಿರ್ಬಂಧ: ಆದೇಶ ವಾಪಸ್

ಏಜೆನ್ಸೀಸ್
Published 1 ಜೂನ್ 2020, 12:37 IST
Last Updated 1 ಜೂನ್ 2020, 12:37 IST
ಗೃಹ ಸಚಿವ ಅಮಿತ್‌ ಶಾ
ಗೃಹ ಸಚಿವ ಅಮಿತ್‌ ಶಾ    

ನವದೆಹಲಿ: ದೇಶದಾದ್ಯಂತ ಪ್ಯಾರಾ ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಮಾರಾಟ ಮಾಡುವ ವಸ್ತುಗಳ ಪಟ್ಟಿಯಿಂದ 1,026 ವಿದೇಶಿ ಉತ್ಪನ್ನಗಳನ್ನು ತೆಗೆದು ಹಾಕುವ ಆದೇಶ ಹೊರ ಬಂದ ಗಂಟೆಯೊಳಗೆ ಕೇಂದ್ರ ಸರ್ಕಾರ ಆದೇಶ ಹಿಂ‍ಪಡೆದಿದೆ. ಪರಿಷ್ಕೃತ ಆದೇಶವನ್ನು ಶೀಘ್ರದಲ್ಲಿಯೇ ಹೊರಡಿಸುವುದಾಗಿ ಹೇಳಿದೆ.

ಸೋಮವಾರ ಮಧ್ಯಾಹ್ನ ಹೊರಡಿಸಲಾದ ಆದೇಶದ ಪ್ರಕಾರ, ಚಾಕೊಲೆಟ್‌, ಎಲೆಕ್ಟ್ರಾನಿಕ್‌ ಸಾಧನಗಳು, ಬ್ರ್ಯಾಂಡೆಡ್‌ ಚಪ್ಪಲಿ ಹಾಗೂ ಶೂಗಳು, ಮೈಕ್ರೊ ಓವನ್‌ಗಳು, ಪೊಲರಾಯ್ಡ್‌ ಕ್ಯಾಮೆರಾ ಸೇರಿದಂತೆ ಆಮದು ಮಾಡಿಕೊಳ್ಳುವ 1,000ಕ್ಕೂ ಹೆಚ್ಚು ವಸ್ತುಗಳು ಸಿಎಪಿಎಫ್‌ ಕ್ಯಾಂಟೀನ್‌ಗಳಲ್ಲಿ ಇಂದಿನಿಂದ ಲಭ್ಯವಿರುವುದಿಲ್ಲ. ಜೂನ್‌ 1ರಿಂದ ಕ್ಯಾಂಟೀನ್‌ಗಳಲ್ಲಿ ಸ್ವದೇಶಿ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ.

ಹೊಸ ಆದೇಶದಲ್ಲಿ ಮಾರಾಟದಿಂದ ಕೈಬಿಡಲಾಗಿರುವ ವಿದೇಶಿ ವಸ್ತುಗಳ ಪರಿಷ್ಕೃತ ಪಟ್ಟಿ ಇರಲಿದೆ. ದೇಶದಾದ್ಯಂತ ಸಿಎಪಿಎಫ್‌ ಕ್ಯಾಂಟೀನ್‌ಗಳಲ್ಲಿ ಸ್ವದೇಶಿ ವಸ್ತುಗಳು ಮಾತ್ರವೇ ಮಾರಾಟಗೊಳ್ಳಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದರು. ಜೂನ್‌ನಿಂದ ಭಾರತದಲ್ಲಿ ತಯಾರಿಸಲಾಗಿರುವ ವಸ್ತುಗಳನ್ನಷ್ಟೇ ಮಾರಾಟ ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಲಾಗಿತ್ತು.

ADVERTISEMENT

ಸ್ಕೆಚರ್ಸ್‌, ಫೆರಾರೊ ಇಂಡಿಯಾ, ರೆಡ್‌ಬುಲ್‌ ಇಂಡಿಯಾ, ವಿಕ್ಟೋರಿನಾಕ್ಸ್‌, ಸಫಿಲೊ ಕಂಪನಿಗಳ ವಸ್ತುಗಳನ್ನು ಮಾರಾಟ ಮಾಡದಂತೆ ಹಿಂದಿನ ಆದೇಶದಲ್ಲಿ ಸೂಚಿಸಲಾಗಿತ್ತು ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪೂರ್ಣ ಭಾರತದಲ್ಲಿಯೇ ಸಿದ್ಧಗೊಂಡಿರುವ ವಸ್ತುಗಳು, ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡು ಇಲ್ಲಿ ವಸ್ತುಗಳನ್ನು ಸಿದ್ಧಪಡಿಸುವುದು ಹಾಗೂ ಪೂರ್ಣ ಆಮದು ಮಾಡಿಕೊಳ್ಳುವ ವಸ್ತುಗಳು; ಹೀಗೆ ಪ್ಯಾರಾ ಮಿಲಿಟರಿ ಕ್ಯಾಂಟೀನ್‌ಗಳು ಮಾರಾಟ ಮಾಡುವ ವಸ್ತುಗಳನ್ನು ಮೂರು ರೀತಿ ವರ್ಗೀಕರಿಸಿಕೊಳ್ಳಲಾಗಿದೆ. ಪೂರ್ಣ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಿಆರ್‌ಪಿಎಫ್‌, ಬಿಎಸ್‌ಎಫ್‌, ಐಟಿಬಿಪಿ, ಸಿಐಎಸ್‌ಎಫ್‌, ಎಸ್‌ಎಸ್‌ಬಿ, ಎನ್‌ಎಸ್‌ಜಿ ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ 10 ಲಕ್ಷ ಭದ್ರತಾ ಸಿಬ್ಬಂದಿಗಳ ಸುಮಾರು 50 ಲಕ್ಷ ಕುಟುಂಬ ಸದಸ್ಯರಿಗೆ ಕ್ಯಾಂಟೀನ್‌ ಸೌಲಭ್ಯವಿದೆ. ಮಾರಾಟದಿಂದ ವಾರ್ಷಿಕ ಸುಮಾರು ₹2,800 ಕೋಟಿ ವಹಿವಾಟು ಪ್ಯಾರಾ ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.