ADVERTISEMENT

ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ಮಸೂದೆ ಬಾಕಿ ಉಳಿಸುವಂತಿಲ್ಲ: ಸುಪ್ರೀಂ ಕೋರ್ಟ್‌

ಮಸೂದೆಗಳಿಗೆ ಅಂಕಿತ: ಸುಪ್ರೀಂ ಕೋರ್ಟ್‌

ಪಿಟಿಐ
Published 24 ನವೆಂಬರ್ 2023, 0:29 IST
Last Updated 24 ನವೆಂಬರ್ 2023, 0:29 IST
   

ನವದೆಹಲಿ: ಶಾಸಕಾಂಗದ ಭಾಗವೂ ಆಗಿರುವ ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕುವುದನ್ನು ತಡೆಹಿಡಿಯಬಾರದು. ಆ ಮೂಲಕ, ಚುನಾಯಿತ ಶಾಸನಸಭೆಯ ಕಾರ್ಯನಿರ್ವಹಣೆಗೆ
ತೊಡಕಾಗಬಾರದು ಎಂದು ಸುಪ್ರಿಂಕೋರ್ಟ್‌ ಹೇಳಿದೆ.

ರಾಜ್ಯಪಾಲರು ರಾಜ್ಯ ವೊಂದರ ಸಾಂವಿಧಾನಿಕ ಮುಖ್ಯಸ್ಥರು. ಅವರು ಕೂಡ ಕೆಲ ಸಾಂವಿಧಾನಿಕ ಅಧಿಕಾರ
ಗಳನ್ನು ಹೊಂದಿರುತ್ತಾರೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳದೆಯೇ ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ಬಾಕಿ ಉಳಿಸಿಕೊಳ್ಳುವ ಅಧಿಕಾರ ಹೊಂದಿಲ್ಲ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.‍ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಹೇಳಿದೆ.

ಜೂನ್‌ 19 ಹಾಗೂ 20ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಅನುಮೋದಿಸಲಾದ ಮಸೂದೆಗಳ ಕುರಿತು ನಿರ್ಧರಿಸುವಂತೆ ಪಂಜಾಬ್‌ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್ ಅವರಿಗೆ ನಿರ್ದೇಶನ ನೀಡಿದೆ. 

ADVERTISEMENT

ಅಧಿವೇಶನದಲ್ಲಿ ಅನುಮೋದಿಸಿದ್ದ ನಾಲ್ಕು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾಯಪೀಠ, ನವೆಂಬರ್ 10ರಂದು ನೀಡಿರುವ ಆದೇಶದಲ್ಲಿ ಈ ಮಾತು ಹೇಳಿದೆ.

27 ಪುಟಗಳ ಆದೇಶದ ಪ್ರತಿಯನ್ನು ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಗುರುವಾರ ಅಪ್‌ಲೋಡ್‌ ಮಾಡಲಾಗಿದೆ.

‘ಜೂನ್‌ 19 ಹಾಗೂ 20ರಂದು ನಡೆದಿದ್ದ ವಿಧಾನಸಭೆ ಅಧಿವೇಶನ ಕಾನೂನುಬದ್ಧ ಹಾಗೂ ಸದನದ ಕಲಾಪಗಳು ಸಿಂಧುವಾಗಿವೆ ಎಂಬುದಾಗಿ ಘೋಷಿಸಬೇಕು’ ಎಂದೂ ಪಂಜಾಬ್‌ ಸರ್ಕಾರ ಕೋರಿತ್ತು.

‘ಈ ಅಧಿವೇಶನಗಳು ಸಿಂಧುವಾಗಿದ್ದು, ಸ್ಪೀಕರ್‌ ತೀರ್ಮಾನ ಕೈಗೊಂಡ ನಂತರ ಈ ವಿಚಾರವಾಗಿ ರಾಜ್ಯಪಾಲರು ಕ್ರಮ ಕೈಗೊಳ್ಳುವಂತಿಲ್ಲ’ ಎಂದೂ ನ್ಯಾಯಪೀಠವು ಆದೇಶದಲ್ಲಿ ಹೇಳಿದೆ.

‘ಸಂವಿಧಾನದ 200ನೇ ವಿಧಿ ಪ್ರಕಾರ ರಾಜ್ಯಪಾಲರು ಮೂರು ಆಯ್ಕೆಗಳನ್ನು ಹೊಂದಿದ್ದಾರೆ. ಮಸೂದೆಗೆ ಅಂಕಿತ ಹಾಕುವುದು, ಅಂಕಿತ ಹಾಕುವುದನ್ನು ತಡೆ ಹಿಡಿಯುವುದು ಇಲ್ಲವೇ ರಾಷ್ಟ್ರಪತಿಗಳು ಪರಿಶೀಲನೆ ನಡೆಸುವ ಸಂಬಂಧ ಮಸೂದೆ ಕಾಯ್ದಿರಿಸುವ ಆಯ್ಕೆಗಳನ್ನು ಹೊಂದಿದ್ದಾರೆ’  ‘ಆದರೆ, ಕಾನೂನು ರಚಿಸುವ ಶಾಸನ ಸಭೆಗಳ ಪ್ರಕ್ರಿಯೆಯನ್ನು ವಿಫಲಗೊಳಿಸುವ ಅಧಿಕಾರವನ್ನು ರಾಜ್ಯಪಾಲರು ಚಲಾಯಿಸಬಾರದು’ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಒಂದು ವೇಳೆ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕುವುದನ್ನು ತಡೆ ಹಿಡಿಯಲು ನಿರ್ಧರಿಸಿದಲ್ಲಿ,
ಸಂವಿಧಾನದ 200ನೇ ವಿಧಿಯ ಮೊದಲ ನಿಬಂಧನೆಯಲ್ಲಿ ಹೇಳಿರುವಂತೆ, ಮಸೂದೆಯನ್ನು ಮರುಪರಿಶೀಲನೆಗಾಗಿ ಶಾಸನಸಭೆಗೆ ಮರಳಿಸಬೇಕು’ ಎಂದೂ ನ್ಯಾಯಪೀಠ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.