ADVERTISEMENT

ಹುದ್ದೆ ತ್ಯಾಗಕ್ಕೂ ಸಿದ್ಧ: ರಾಜ್ಯಪಾಲ ಮಲಿಕ್‌

ರೈತರ ಪರ ಬಿಜೆಪಿ ವಿರುದ್ಧ ಹೇಳಿಕೆ

ಪಿಟಿಐ
Published 18 ಮಾರ್ಚ್ 2021, 19:31 IST
Last Updated 18 ಮಾರ್ಚ್ 2021, 19:31 IST
ಸತ್ಯಪಾಲ್ ಮಲಿಕ್
ಸತ್ಯಪಾಲ್ ಮಲಿಕ್   

ನವದೆಹಲಿ: ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಕ್ಕೆ ನೋವಾಗಿದೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ‘ಒಂದು ವೇಳೆ ನನ್ನ ಈ ಅಭಿಪ್ರಾಯದ ಬಗ್ಗೆ ಪಕ್ಷ ಆಕ್ಷೇಪ ಎತ್ತಿದರೆ, ರಾಜ್ಯಪಾಲ ಹುದ್ದೆಯನ್ನು ತೊರೆದು ಹೊರಗಿನಿಂದ ರೈತರ ಪರವಾಗಿ ದನಿ ಎತ್ತುತ್ತೇನೆ’ ಎಂದು ಮಲಿಕ್ ಹೇಳಿದ್ದಾರೆ.

‘ನಾನು ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಹೀಗಾಗಿಯೇ ರೈತರು ಅನುಭವಿಸುತ್ತಿರುವ ನೋವು ಅರ್ಥಮಾಡಿಕೊಂಡಿದ್ದೇನೆ. ನನ್ನ ಅಭಿಪ್ರಾಯದ ಬಗ್ಗೆ ಪಕ್ಷದ ಮುಖಂಡರು ಏನೇ ಅಂದುಕೊಂಡರೂ ನನಗೆ ಚಿಂತೆಯಿಲ್ಲ’ ಎಂದೂ ಮಲಿಕ್ ಹೇಳಿದ್ದಾರೆ.

ರೈತರು ಹಾಗೂ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಈವರೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಕೃಷಿಕ ಸಮುದಾಯವನ್ನು ಸರ್ಕಾರ ಕರೆದು ಮಾತುಕತೆಯನ್ನು ಮತ್ತೆ ಪ್ರಾರಂಭಿಸಬೇಕು ಎಂದು ಅವರು ಹೇಳಿದರು.

ADVERTISEMENT

ರೈತರ 100 ದಿನಗಳ ಪ್ರತಿಭಟನೆಯಲ್ಲಿ ಸತ್ತವರ ಕುರಿತು ಯಾರೂ ಮಾತನಾಡದಿದ್ದುದಕ್ಕೆ ಮಲಿಕ್ ವಿಷಾದ ವ್ಯಕ್ತಪಡಿಸಿದ್ದಾರೆ.

‘ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ನಾನು ರೈತರ ಸಮಸ್ಯೆಗಳ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ನನ್ನನ್ನು ಮಾಧ್ಯಮಗಳು ಪ್ರಶ್ನಿಸಿವೆ. ಒಂದು ನಾಯಿಯನ್ನು ಕೊಂದರೂ, ಎಲ್ಲೆಡೆಯಿಂದ ಸಂತಾಪ ಸಂದೇಶಗಳ ಸುರಿಮಳೆಯಾಗುತ್ತದೆ. ಹೀಗಿರುವಾಗ 250 ರೈತರು ಸತ್ತಿದ್ದಾರೆ ಎಂದರೂ ಯಾರೂ ಒಂದೇ ಒಂದು ಪದವನ್ನು ಉಚ್ಚರಿಸಿಲ್ಲ’ ಎಂದು ಅವರು ಹೇಳಿದರು.

‘ರೈತರ ಪ್ರತಿಭಟನೆ ಬಗ್ಗೆ ಮಾತನಾಡುವುದನ್ನು ನಾವು ಕೈಬಿಟ್ಟರೆ, ರಾಜಕೀಯದ ಲಾಭ ಮಾಡಿಕೊಳ್ಳುವ ವಿರೋಧಿಗಳಿಗೆ ಸಂಪೂರ್ಣ ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದು ಮಲಿಕ್ ಹೇಳಿದ್ದಾರೆ.

ರೈತರ ಮನ ನೋಯಿಸದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಭಾನುವಾರ ಒತ್ತಾಯಿಸಿದ್ದರು. ತಮ್ಮ ತವರು ಜಿಲ್ಲೆ ಭಾಗಪತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕೇಂದ್ರವು ಕಾನೂನು ಖಾತರಿ ನೀಡಿದರೆ, ರೈತರು ತಮ್ಮ ಪಟ್ಟು ಸಡಿಲಿಸುತ್ತಾರೆ
ಎಂದಿದ್ದಾರೆ.

‘ಯಾವ ಕಾನೂನೂ ರೈತ ಪರವಾಗಿಲ್ಲ’

‘ಯಾವುದೇ ಕಾನೂನು ರೈತರ ಪರವಾಗಿಲ್ಲ. ಇದನ್ನು ಸರಿಪಡಿಸಬೇಕಾದ ತುರ್ತು ಈಗ ಇದೆ. ರೈತರ ಸಮಸ್ಯೆ ಪರಿಹಾರಕ್ಕೋಸ್ಕರ ಎಂತಹ ಸ್ಥಿತಿಯನ್ನಾದರೂ ನಾನು ಎದುರಿಸಲು ಸಿದ್ಧ’ ಎಂದು ಮಲಿಕ್ ಹೇಳಿದ್ದಾರೆ

‘ರೈತರಿಗೆ ಎಂದಿಗೂ ನಿರಾಸೆ ಮಾಡಬೇಡಿ’ ಎಂದು ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಅವರನ್ನು ಕೋರಿದ್ದಾರೆ.

‘ರೈತರು ಮತ್ತು ಸೈನಿಕರು ಸಂತುಷ್ಟರಾಗದಿದ್ದಲ್ಲಿ, ಆ ದೇಶವು ಮುಂದೆ ಸಾಗಲು ಸಾಧ್ಯವಿಲ್ಲ. ಆ ದೇಶ ಉಳಿಯುವುದೂ ಇಲ್ಲ. ಆದ್ದರಿಂದ ಸೇನೆ ಮತ್ತು ರೈತರನ್ನು ಸರ್ಕಾರ ತೃಪ್ತಿಪಡಿಸಬೇಕು’ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ನೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಾಲಿ ಕೈಯಲ್ಲಿ ದೆಹಲಿಯಿಂದ ಕಳಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

‘ರೈತರ ಪರಿಸ್ಥಿತಿ ದಿನೇ ದಿನೇ ಅವರನ್ನು ಬಡವರನ್ನಾಗಿಸುತ್ತಿದೆ. ಆದರೆ ಸರ್ಕಾರಿ ಅಧಿಕಾರಿಗಳ ಸಂಬಳ ಪ್ರತಿ ಮೂರು ವರ್ಷಕ್ಕೊಮ್ಮೆ ಏರಿಕೆಯಾಗುತ್ತದೆ. ರೈತರು ಮಾರುವ ಎಲ್ಲ ವಸ್ತುಗಳನ್ನು ಕಡಿಮೆ ಬೆಲೆಗೆ ಕೇಳುತ್ತಾರೆ. ಆದರೆ ರೈತರು ಕೊಳ್ಳುವ ಎಲ್ಲ ವಸ್ತುಗಳೂ ದುಬಾರಿಯಾಗಿರುತ್ತವೆ’ ಎಂದು ಮಲಿಕ್ ರೈತರ ಪಾಡನ್ನು ವಿವರಿಸಿದ್ದಾರೆ.

* ರೈತರ ಪ್ರತಿಭಟನೆ ಅಂತ್ಯಗೊಳಿಸುವ ದಿಸೆಯಲ್ಲಿ ಸರ್ಕಾರದಿಂದ ಯಾವುದೇ ಸೂಚನೆ ಬಂದರೆ, ಸಂಧಾನದ ಮಧ್ಯವರ್ತಿಯ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ

–ಕೆ.ಸಿ. ತ್ಯಾಗಿ, ಜೆಡಿಯು ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.