ADVERTISEMENT

ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 16:24 IST
Last Updated 6 ನವೆಂಬರ್ 2023, 16:24 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ವಿಧಾನಸಭೆಗಳು ಅನುಮೋದನೆ ನೀಡುವ ಮಸೂದೆಗಳಿಗೆ ರಾಜ್ಯ‍ಪಾಲರು ಅಂಕಿತ ಹಾಕದೆ ಇದ್ದಾಗ, ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರಗಳು ಕೋರ್ಟ್‌ ಮೆಟ್ಟಿಲೇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ‘ರಾಜ್ಯಪಾಲರು ತಾವು ಚುನಾಯಿತ ಪ್ರತಿನಿಧಿ ಅಲ್ಲ ಎಂಬುದನ್ನು ಮರೆಯಬಾರದು’ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ನ್ಯಾಯಪೀಠವು, ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳ ನಡುವೆ ಮತ್ತೆ ಮತ್ತೆ ಸಂಘರ್ಷ ಉಂಟಾಗುತ್ತಿರುವುದರ ಕುರಿತು ಕೂಡ ಕಳವಳ ವ್ಯಕ್ತಪಡಿಸಿದೆ. ಎರಡೂ ಕಡೆಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.

ADVERTISEMENT

ಏಳು ಮಸೂದೆಗಳು ರಾಜ್ಯಪಾಲರ ಅಂಕಿತಕ್ಕಾಗಿ ಕಾಯುತ್ತಿವೆ ಎಂದು ಪಂಜಾಬ್ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಈ ವಿಚಾರದಲ್ಲಿ ರಾಜ್ಯಪಾಲರು ಕೈಗೊಂಡ ಕ್ರಮಗಳ ಬಗ್ಗೆ ವಿವರ ಸಲ್ಲಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.

‘ಬಜೆಟ್ ಅಧಿವೇಶನ ಕರೆಯಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಏಕೆ ಬರಬೇಕು... ಈ ವಿಷಯಗಳನ್ನು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಪೀಠ ಹೇಳಿತು. ‘ರಾಜ್ಯಪಾಲರು ತಾವು ಚುನಾಯಿತ ಪ್ರಾಧಿಕಾರ ಅಲ್ಲ ಎಂಬುದನ್ನು ಅರಿಯಬೇಕು’ ಎಂದು ಕಟುವಾಗಿ ಹೇಳಿತು.

ಪಂಜಾಬ್ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ‘ಸ್ಪೀಕರ್ ಅವರು ವಿಧಾನಸಭೆಯ ಕಲಾಪವನ್ನು ಮತ್ತೆ ಕರೆದಿದ್ದರು, ವಿಧಾನಸಭೆಯು ಏಳು ಮಸೂದೆಗಳಿಗೆ ಅನುಮೋದನೆ ನೀಡಿದೆ. ಆದರೆ ರಾಜ್ಯಪಾಲರು ಮಸೂದೆಗಳಿಗೆ ಸಹಿ ಹಾಕುತ್ತಿಲ್ಲ’ ಎಂದು ವಿವರಿಸಿದರು. ಜೂನ್‌ನಲ್ಲಿ ನಡೆದ ಅಧಿವೇಶನವು ಕಾನೂನುಬದ್ಧವಾಗಿ ಇರಲಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ಮಸೂದೆಗಳ ವಿಚಾರವಾಗಿ ರಾಜ್ಯಪಾಲರು ಒಂದಿಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೆಹ್ತಾ ಅವರು ಪೀಠಕ್ಕೆ ವಿವರಿಸಿದರು. ಅದಕ್ಕೆ ಸಂಬಂಧಿಸಿದ ವಿವರಗಳನ್ನು ಶುಕ್ರವಾರ ಸಲ್ಲಿಸಲಾಗುವುದು ಎಂದರು.

ತೆಲಂಗಾಣದಲ್ಲಿ ನಡೆದ ಬೆಳವಣಿಗೆಯೊಂದರ ಬಗ್ಗೆ ಸಿಂಘ್ವಿ ಉಲ್ಲೇಖಿಸಿದಾಗ, ‘ಇದಕ್ಕೆಲ್ಲ ಸುಪ್ರೀಂ ಕೋರ್ಟ್‌ವರೆಗೆ ಏಕೆ ಬರಬೇಕು? ಇದು ನಿಲ್ಲಬೇಕು’ ಎಂದು ಪೀಠ ಉತ್ತರಿಸಿತು. ತೆಲಂಗಾಣ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರದಲ್ಲಿ, ಏಪ್ರಿಲ್‌ನಲ್ಲಿ ಮಸೂದೆಗಳಿಗೆ ಅಂಕಿತ ಹಾಕಲಾಗುವುದು ಎಂದು ರಾಜ್ಯಪಾಲರು ಹೇಳಿದ್ದಾರೆ ಎಂಬ ಮಾಹಿತಿಯನ್ನು ಸಿಂಘ್ವಿ ಪೀಠಕ್ಕೆ ನೀಡಿದರು.

ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಅವರು ಕೇರಳ ಸರ್ಕಾರಕ್ಕೆ ಸಂಬಂಧಿಸಿದ ಅರ್ಜಿಯೊಂದರ ಬಗ್ಗೆ ಗಮನ ಸೆಳೆದರು. ಎಲ್‌ಡಿಎಫ್‌ ಸರ್ಕಾರವು ಮಸೂದೆಗಳು ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಅಂಕಿತಕ್ಕೆ ಬಾಕಿ ಇರುವ ಬಗ್ಗೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರದಲ್ಲಿ, ಈ ಬಗ್ಗೆ ಕೋರ್ಟ್‌ನಲ್ಲಿಯೇ ಉತ್ತರ ನೀಡುವುದಾಗಿ ರಾಜ್ಯಪಾಲರು ಹೇಳಿದ್ದರು ಎಂದು ತಿಳಿಸಿದರು.

ವಿಧಾನಸಭೆಯು ಅನುಮೋದನೆ ನೀಡಿದ ಮಸೂದೆಗಳ ವಿಚಾರವಾಗಿ ರಾಜ್ಯಪಾಲರು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ಕೂಡ ಅರ್ಜಿಯೊಂದನ್ನು ಸಲ್ಲಿಸಿದೆ.

ತಮಿಳುನಾಡಿನ ಅರ್ಜಿ

ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರು ವಿಳಂಬ ಧೋರಣೆ ಅನುಸರಿಸುತ್ತಿ
ದ್ದಾರೆ ಎಂದು ತಮಿಳುನಾಡು ಸರ್ಕಾರ ಕೂಡ ಸುಪ್ರೀಂ ಕೋರ್ಟ್‌ಗೆ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದೆ. ಮಸೂದೆಗಳಿಗೆ ಕಾಲಮಿತಿಯಲ್ಲಿ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಸೂಚನೆ ನೀಡಬೇಕು ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಅನ್ನು ಕೋರಿದೆ.

2020ರ ನಂತರದಲ್ಲಿ ತಮಿಳುನಾಡು ವಿಧಾನಸಭೆಯು ಅನುಮೋದನೆ ನೀಡಿರುವ 12 ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ. ಎಐಎಡಿಎಂಕೆ ಪಕ್ಷಕ್ಕೆ ಸೇರಿದ ಮಾಜಿ ಸಚಿವರ ವಿರುದ್ಧ ಕ್ರಮಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಕಡತಗಳು 2022ರಿಂದ ಬಾಕಿ ಉಳಿದಿವೆ ಎಂದು ಅಂಶಗಳನ್ನು ತಮಿಳುನಾಡು ಸರ್ಕಾರ ಉಲ್ಲೇಖಿಸಿದೆ.

ಪಂಜಾಬ್‌ನಲ್ಲಿ ಆಗಿದ್ದು ಇದು

ರಾಜ್ಯಪಾಲ ಭಂವರಿಲಾಲ್ ಪುರೋಹಿತ್ ವಿರುದ್ಧ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಪಂಜಾಬ್ ಸರ್ಕಾರವು, 27 ಮಸೂದೆಗಳ ಪೈಕಿ 22 ಮಸೂದೆಗಳಿಗೆ ಮಾತ್ರ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದೆ.

ಬಜೆಟ್ ಅಧಿವೇಶನವನ್ನು ರಾಜ್ಯಪಾಲರು ಕರೆಯುತ್ತಿಲ್ಲ ಎಂದು ಫೆಬ್ರುವರಿಯಲ್ಲಿ ಕೂಡ ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಸರ್ಕಾರಿಯಾ ಆಯೋಗದ ವರದಿಯನ್ನು ಉಲ್ಲೇಖಿಸಿ, ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಸಮಯಮಿತಿ ಕುರಿತಾಗಿ ಮಾರ್ಗಸೂಚಿ ಇರಬೇಕು ಎಂದು ರಾಜ್ಯಗಳು ಕೇಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.