ನವದೆಹಲಿ: ಆಡಳಿತಾರೂಢ ಡಿಎಂಕೆ ನಾಯಕ ಕೆ.ಪೊನ್ನುಮುಡಿ ಅವರನ್ನು ಸಂಪುಟ ಸಚಿವರನ್ನಾಗಿ ನೇಮಿಸಲು ರಾಜ್ಯಪಾಲ ಆರ್.ಎನ್.ರವಿ ನಿರಾಕರಿಸಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ತಮಿಳುನಾಡು ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಿರುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
‘ಉನ್ನತ ಶಿಕ್ಷಣ ಸಚಿವರಾಗಿದ್ದ ಪೊನ್ನುಮುಡಿ ಅವರನ್ನು ಮರಳಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾದದ್ದು’ ಎಂದು ಅಭಿಪ್ರಾಯಪಟ್ಟ ರಾಜ್ಯಪಾಲ ರವಿ, ರಾಜ್ಯ ಸರ್ಕಾರದ ಕೋರಿಕೆಯನ್ನು ತಿರಸ್ಕರಿಸಿದ್ದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಎದುರು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ರಾಜ್ಯ ಸರ್ಕಾರದ ಮನವಿ ಸಲ್ಲಿಸಿದರು. ತ್ವರಿತ ವಿಚಾರಣೆ ನಡೆಸಬೇಕಿರುವುದರಿಂದ ಅರ್ಜಿಯನ್ನು ಪುರಸ್ಕರಿಸುವಂತೆ ಪೀಠವನ್ನು ಕೋರಿದರು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಸಚಿವ ಸಂಪುಟದ ಸಲಹೆ ಮೇರೆಗೆ ರಾಜ್ಯಪಾಲರು ಕಾರ್ಯನಿರ್ವಹಿಸುವಂತೆ ನಿರ್ದೇಶಿಸಲು ಕೋರಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ.
'ಈ ನ್ಯಾಯಾಲಯದಲ್ಲಿ ಹಿಂದೆಯೂ ವ್ಯವಹರಿಸಿದ್ದ ತಪ್ಪಿತಸ್ಥ ರಾಜ್ಯಪಾಲ ಇವರೇ. ಪೊನ್ನುಮುಡಿ ವಿರುದ್ಧದ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅವರ ನೇಮಕವನ್ನು ಮುಖ್ಯಮಂತ್ರಿ ಶಿಫಾರಸು ಮಾಡಿದ್ದಾರೆ. ಆದರೆ ರಾಜ್ಯಪಾಲ ಅವರು ಪತ್ರ ಬರೆದು, ಸಂವಿಧಾನಾತ್ಮಕ ಅನೈತಿಕತೆ ಎಂದಿದ್ದಾರೆ’ ಎಂದು ಸಿಂಘ್ವಿ ಅವರು ಪೀಠಕ್ಕೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘ಈ ಕುರಿತ ವಿವರಣೆಯನ್ನು ಇಮೇಲ್ ಕಳುಹಿಸಿ’ ಎಂದು ಸಿಂಘ್ವಿಗೆ ತಿಳಿಸಿದರು.
ಪೊನ್ನುಮುಡಿ ನೇಮಕ ಕುರಿತು ಮುಖ್ಯಮಂತ್ರಿ ಸ್ಟಾಲಿನ್‌ಗೆ ಪತ್ರ ಬರೆದಿದ್ದ ರಾಜ್ಯಪಾಲ ರವಿ, ‘ಪೊನ್ನುಮುಡಿಗೆ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಮಧ್ಯಂತರ ಆದೇಶ ನೀಡಿದೆಯಷ್ಟೇ’ ಎಂದಿದ್ದರು.
ಘೋಷಿತ ಆಸ್ತಿಗಿಂತ ಹೆಚ್ಚಿನ ಸಂಪತ್ತು ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಪೊನ್ನುಮುಡಿ ಶಾಸಕತ್ವವನ್ನೂ ಮದ್ರಾಸ್ ಹೈಕೋರ್ಟ್ ರದ್ದುಪಡಿಸಿತ್ತು. ಜತೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಪೊನ್ನುಮುಡಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತು. ಈ ಆದೇಶದ ಹಿನ್ನೆಲೆಯಲ್ಲಿ ಪೊನ್ನುಮುಡಿ ಅವರ ಶಾಸಕತ್ವವನ್ನು ರಾಜ್ಯ ಸರ್ಕಾರ ಪುನರ್‌ಸ್ಥಾಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.