ADVERTISEMENT

ಸನಾತನ ಸಂಸ್ಥಾ ಪಾತ್ರ ಕುರಿತು ತನಿಖೆ: ಎಟಿಎಸ್‌ಗೆ ಪಾನ್ಸರೆ ಕುಟುಂಬದ ಪತ್ರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:51 IST
Last Updated 2 ಜುಲೈ 2024, 14:51 IST
ಗೋವಿಂದರಾವ್‌ ಪಾನ್ಸರೆ
ಗೋವಿಂದರಾವ್‌ ಪಾನ್ಸರೆ   

ಮುಂಬೈ: ವಿಚಾರವಾದಿ, ಎಡಪಂಥೀಯ ನಾಯಕ ಗೋವಿಂದ ಪಾನ್ಸರೆ ಅವರ ಕುಟುಂಬ ಸದಸ್ಯರು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ಪಡೆಗೆ (ಎಟಿಎಸ್‌) ಪತ್ರ ಬರೆದಿದ್ದು, ಪಾನ್ಸರೆ ಹತ್ಯೆ ಕೃತ್ಯಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥಾ ಸಂಘಟನೆಯ ಪಾತ್ರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ವಿಚಾರವಾದಿಗಳ ಹತ್ಯೆಗೆ ಹಿಂದುತ್ವ ಪರ ಸಂಘಟನೆಯಾದ ಸನಾತನ ಸಂಸ್ಥೆಯು ಕಾರ್ಯತಂತ್ರ ಹಾಗೂ ಪೂರ್ವಯೋಜನೆಯನ್ನು ರೂಪಿಸುತ್ತಿತ್ತು ಎಂಬ ಅಂಶವು ಪೊಲೀಸರ ತನಿಖೆಯಿಂದ ಬಯಲಾಗಿದೆ ಎಂಬುದನ್ನೂ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸನಾತನ ಸಂಸ್ಥೆಯ ಸ್ಥಾಪಕ ಡಾ.ಜಯಂತ್‌ ಅಠವಳೆ ಅವರ ಪಾತ್ರ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಎಟಿಎಸ್‌ ವರಿಷ್ಠಾಧಿಕಾರಿ ಜಯಂತ್ ಮೀನಾ ಅವರಿಗೆ ಬರೆದಿರುವ 68 ಪುಟಗಳ ಪತ್ರದಲ್ಲಿ ಒತ್ತಾಯಿಸಿದೆ.

ADVERTISEMENT

ಕುಟುಂಬದ ಸದಸ್ಯರಾದ ಡಾ. ಮೇಘಾ ಪಾನ್ಸರೆ, ಸ್ಮಿತಾ ಪಾನ್ಸರೆ, ಕಬೀರ್ ಪಾನ್ಸರೆ ಅವರ ಪತ್ರ ಬರೆದಿದ್ದಾರೆ.

ಕಾಮ್ರೆಡ್‌ ಪಾನ್ಸರೆ ಅವರನ್ನು ಅವರ ಜಾತ್ಯಾತೀತತೆ, ವಿಚಾರಪರತೆ, ಸಮಾನತೆ, ನಿರ್ಲಕ್ಷ್ಯಿತ ವರ್ಗದ ಏಳಿಗೆಗಾಗಿ ತೋರುತ್ತಿದ್ದ ಆಸಕ್ತಿಯ ಹಿನ್ನೆಲೆಯಲ್ಲಿ ಸನಾತನ ಸಂಸ್ಥಾ, ಹಿಂದೂ ಜಾಗೃತಿ ಸಮಿತಿಯಂತಹ ಬಲಪಂಥೀಯ ಚಿಂತನೆಯ ಹಿಂದುತ್ವ ಸಂಘಟನೆಗಳು ಕಟುವಾಗಿ ವಿರೋಧಿಸುತ್ತಿದ್ದವು ಎಂಬುದನ್ನು ಉಲ್ಲೇಖಿಸಲಾಗಿದೆ. 

ಪಾನ್ಸರೆ ಹತ್ಯೆ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಆರಂಭಿಸುವುದರ ಪೂರ್ವದಲ್ಲಿ ಈ ಪತ್ರ ಬರೆಯಲಾಗಿದೆ. ಬಾಂಬೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಎಟಿಎಸ್‌ಗೆ ವಹಿಸಿತ್ತು.

ಸನಾತನ ಸಂಸ್ಥಾದ ಸ್ಥಾಪಕ ಡಾ. ಜಯಂತ ಅಠವಳೆ, ಅದರ ನಾಯಕ ವೀರೇಂಧ್ರ ಮರಾಠೆ ಹಾಗೂ ಪದಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ಪಾನ್ಸರೆ, ಡಾ. ನರೇಂದ್ರ ದಾಬೋಲ್ಕರ್, ಪ್ರೊ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್  ಹತ್ಯೆ ಪ್ರಕರಣಗಳಿಗೆ ಪರಸ್ಪರ ಸಂಬಂಧವಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.