ಮುಂಬೈ: ಆಕಸ್ಮಿಕವಾಗಿ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದ 60 ವರ್ಷದ ನಟ ಗೋವಿಂದ ಅವರು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.
ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನೆಯ ನಾಯಕರೂ ಆಗಿರುವ ಗೋವಿಂದ, ‘ನನ್ನ ಕಾಲಿಗೆ ಗುಂಡು ತಗುಲಿತ್ತು. ಅದನ್ನು ಈಗ ಹೊರತೆಗೆಯಲಾಗಿದೆ. ನನ್ನ ಅಭಿಮಾನಿಗಳು, ದೇವರು ಹಾಗೂ ಹೆತ್ತವರ ಆಶಿರ್ವಾದದಿಂದ ನಾನೀಗ ಚೇತರಿಸಿಕೊಂಡಿದ್ದೇನೆ’ ಎಂದು ತಮ್ಮ ಅಭಿಮಾನಿಗಳಿಗೆ ನೀಡಿರುವ ಆಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
‘ಗೋವಿಂದ ಅವರ ಎಡ ಮೊಣಕಾಲಿನ ಕೆಳಗೆ ಗುಂಡು ತಗುಲಿದ್ದ ಜಾಗದಲ್ಲಿ 8–10 ಹೊಲಿಗೆ ಹಾಕಲಾಗಿದೆ’ ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದರು.
ಮಂಗಳವಾರ ಗೋವಿಂದ ಅವರ ಮುಂಬೈನ ನಿವಾಸದಲ್ಲಿ ಗನ್‌ನಿಂದ ಆಕಸ್ಮಿಕವಾಗಿ ಕಾಲಿಗೆ ಗುಂಡೇಟು ತಗುಲಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಗೋವಿಂದ ಗುಣಮುಖರಾಗಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ ಅವರು ನೃತ್ಯ ಮಾಡುತ್ತಾರೆ. ಎಲ್ಲರೂ ಅವರಿಗಾಗಿ ಪ್ರಾರ್ಥಿಸಿದ್ದಾರೆ. ದೇವರ ಆಶಿರ್ವಾದ ನಮ್ಮ ಮೇಲಿದೆ. ಕನಿಷ್ಠ ಆರು ವಾರಗಳವರೆಗೆ ವಿಶ್ರಾಂತಿ ತೆಗದುಕೊಳ್ಳುವಂತೆ ಅವರಿಗೆ ವೈದ್ಯರು ಸೂಚಿಸಿದ್ದಾರೆ’ ಎಂದು ಅವರ ಪತ್ನಿ ಸುನಿತಾ ಅಹುಜಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.