ADVERTISEMENT

‘ಪ್ರತಿ ದಿನ 10 ಲಕ್ಷ ಆಯುಷ್ಮಾನ್ ಭಾರತ ಕಾರ್ಡ್‌ ನೀಡಿಕೆ: ಕೇಂದ್ರದ ಗುರಿ’

ಪಿಟಿಐ
Published 25 ಸೆಪ್ಟೆಂಬರ್ 2022, 14:33 IST
Last Updated 25 ಸೆಪ್ಟೆಂಬರ್ 2022, 14:33 IST
ಮನ್ಸುಖ್‌ ಮಾಂಡವೀಯ
ಮನ್ಸುಖ್‌ ಮಾಂಡವೀಯ   

ನವದೆಹಲಿ (ಪಿಟಿಐ): ‘ಆಯುಷ್ಮಾನ್‌ ಭಾರತ– ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಪ್ರತಿ ದಿನ 10 ಲಕ್ಷ ಆಯುಷ್ಮಾನ್‌ ಭಾರತ ಕಾರ್ಡುಗಳನ್ನು ನೀಡಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ಭಾನುವಾರ ತಿಳಿಸಿದರು.

ನಾಲ್ಕು ವರ್ಷ ಪೂರೈಸಿದ ಆಯುಷ್ಮಾನ್‌ ಭಾರತ– ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಒಂದು ವರ್ಷ ಪೂರೈಸಿದ ಆಯುಷ್ಮಾನ್‌ ಭಾರತ ಡಿಜಿಟಲ್‌ ಮಿಷನ್‌ ಯೋಜನೆಗಳ ಸಂಬಂಧ ನಡೆದ‘ಆರೋಗ್ಯ ಮಂಥನ್‌ 2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ, ‘ಇಲ್ಲಿಯವರೆಗೆ ಆಯುಷ್ಮಾನ್‌ ಕಾರ್ಡ್‌ ಅಡಿಯಲ್ಲಿ ₹45,294 ಚಿಕಿತ್ಸಾ ವೆಚ್ಚದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ 3.95 ಕೋಟಿ ರೋಗಿಗಳ ದಾಖಲಾತಿಯಾಗಿದೆ. ಎಲ್ಲಾ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 19 ಕೋಟಿಗೂ ಅಧಿಕ ಮಂದಿಗೆ ಆಯುಷ್ಮಾನ್‌ ಭಾರತ ಕಾರ್ಡ್‌ಗಳನ್ನು ನೀಡಲಾಗಿದೆ’ ಎಂದರು.

‘ಮೊದಲೆಲ್ಲ 1ರಿಂದ 1.5 ಲಕ್ಷ ಆಯುಷ್ಮಾನ ಭಾರತ ಕಾರ್ಡುಗಳನ್ನು ಸೃಜಿಸಲಾಗುತ್ತಿತ್ತು. ಈಗ ಈ ಸಂಖ್ಯೆಗಳು 4ರಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. ಈ ಪ್ರಗತಿ ಇನ್ನೂ ಎತ್ತರಕ್ಕೆ ಏರಬೇಕು ಎನ್ನುವ ದೃಷ್ಟಿಯಿಂದ ಪ್ರತಿ ದಿನ 10 ಲಕ್ಷ ಕಾರ್ಡ್‌ಗಳನ್ನು ಸೃಜಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದರು.

ADVERTISEMENT

‘24 ಕೋಟಿಗೂ ಅಧಿಕ ಆಯುಷ್ಮಾನ್‌ ಆರೋಗ್ಯ ಅಕೌಂಟ್‌ಗಳನ್ನು ಸೃಜಿಸಲಾಗಿದೆ. ಇದು ಆರೋಗ್ಯ ದಾಖಲಾತಿಗಳ ಡಿಜಿಟಲೀಕರಣದ ಮೈಲಿಗಲ್ಲಾಗಿದೆ. ಜೊತೆಗೆ, ಆಯುಷ್ಮಾನ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್‌ ಅಡಿಯಲ್ಲಿ ಪ್ರತಿ ಜಿಲ್ಲೆಯ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ₹100 ಕೋಟಿ ಅಷ್ಟು ಹಣವನ್ನು ಖರ್ಚು ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.