ನವದೆಹಲಿ: ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆಯ ಖಾತರಿಗೆ ಪೂರಕವಾಗಿ ‘ವಿದ್ಯುತ್ ನಿಯಮಗಳು (ವಿಳಂಬ ಪಾವತಿಗೆ ಸರ್ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) 2022’ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ.
ಎಲ್ಲ ಪ್ರಕಾರದ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಯ ಖಾತರಿಯನ್ನು ಉಲ್ಲೇಖಿತ ತಿದ್ದುಪಡಿಯು ನೀಡಲಿದೆ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹೆಚ್ಚುವರಿ ವಿದ್ಯುತ್‌ಗೆ ನಿಶ್ಚಿತ ಶುಲ್ಕ ಪಾವತಿಸುವಂತೆ ಬೇಡಿಕೆ ಮಂಡಿಸುವ ಅರ್ಹತೆ ಪಡೆಯಲು ವಿದ್ಯುತ್ ಉತ್ಪಾದಕ ಸಂಸ್ಥೆಗಳು ಈಗ, ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ)ಅಗತ್ಯವಿಲ್ಲದ ಹೆಚ್ಚುವರಿ ವಿದ್ಯುತ್ ಹಿಂಪಡೆಯುವುದಾಗಿಯೂ ಭರವಸೆ ನೀಡಬೇಕಾಗಿದೆ.
ಕೆಲ ವಿದ್ಯುತ್ ಉತ್ಪಾದಕ ಸಂಸ್ಥೆಗಳು ಸದ್ಯ ಹೆಚ್ಚುವರಿ ವಿದ್ಯುತ್ ಹಿಂಪಡೆಯಲು ನಿರಾಕರಿಸುತ್ತಿದ್ದವು. ಇದರಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗದ ವಿದ್ಯುಚ್ಛಕ್ತಿ ಉಳಿಯುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಹಾಗೂ ಲಭ್ಯ ವಿದ್ಯುತ್‌ನ ಪರಿಣಾಮಕಾರಿ ಬಳಕೆಗೆ ಪೂರಕವಾಗಿ ಈ ತಿದ್ದುಪಡಿ ಮಾಡಲಾಗಿದೆ. ಹೆಚ್ಚುವರಿ ವಿದ್ಯುತ್ ನೀಡಲು ಒಪ್ಪದ ಉತ್ಪಾದಕ ಸಂಸ್ಥೆಗಳು ಈಗ, ಹೆಚ್ಚುವರಿ ವಿದ್ಯುತ್‌ಗೆ ನಿಶ್ಚಿತ ಶುಲ್ಕಕ್ಕಾಗಿ ಹಕ್ಕು ಪ್ರತಿಪಾದಿಸಲಾಗದು. ಇದರಿಂದಾಗಿ, ಹೆಚ್ಚುವರಿ ವಿದ್ಯುತ್ ಖರೀದಿಸಿ ಬಳಸುವುದು ಸಾಧ್ಯವಾಗಲಿದೆ ಎಂದು ವಿವರಿಸಿದರು.
ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ವಿದ್ಯುತ್ ಪೂರೈಕೆ ಸಂಸ್ಥೆಗಳು ಎದುರಿಸುತ್ತಿದ್ದ ಹಣದ ಹರಿವು ಸಮಸ್ಯೆಗೆ ಪರಿಹಾರವಾಗಿ 2022ರಲ್ಲಿ ನಿಯಮ ರೂಪಿಸಲಾಗಿತ್ತು. ವಿದ್ಯುತ್ ಕ್ಷೇತ್ರದಲ್ಲಿ ಸಕಾಲದಲ್ಲಿ ಹಣದ ಪಾವತಿ ಖಾತರಿಪಡಿಸುವುದು ಇದರ ಉದ್ದೇಶವಾಗಿತ್ತು. ಈ ಅಧಿಸೂಚನೆ ಬಳಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತ್ತು. ಬಾಕಿ ಬಿಲ್‌ಗಳ ಮೊತ್ತ ಜೂನ್ 2022ರಲ್ಲಿ ₹ 1.4 ಲಕ್ಷ ಕೋಟಿ ಇದ್ದರೆ, ಈ ಮೊತ್ತ ಫೆಬ್ರುವರಿ 2024ರ ವೇಳೆಗೆ ₹ 48,000 ಕೋಟಿಗೆ ಇಳಿದಿತ್ತು ಎಂದು ಈ ಸಂಬಂಧ ನೀಡಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.