ಅಮರಾವತಿ: ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿರುವುದರಿಂದ ನದಿ ತಟದಲ್ಲಿರುವ ಮನೆಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆಂಧ್ರಪ್ರದೇಶ ಸರ್ಕಾರವು ಶನಿವಾರ ಚಂದ್ರಬಾಬು ನಾಯ್ಡು ಅವರಿಗೆ ಸೂಚನೆ ನೀಡಿದೆ. ಸರ್ಕಾರದ ಈ ಕ್ರಮವು ಬಿರುಸಿನ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ವಿಜಯವಾಡದಲ್ಲಿ ಕೃಷ್ಣಾನದಿ ತೀರದ ಮನೆಯಲ್ಲಿ ಟಿಡಿಪಿ ಮುಖ್ಯಸ್ಥ, ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಾಸಿಸುತ್ತಿದ್ದಾರೆ.
ಪ್ರವಾಹ ಪರಿಸ್ಥಿತಿ ಇರುವುದರಿಂದ ಸುರಕ್ಷಿತ ಜಾಗಕ್ಕೆ ತೆರಳುವಂತೆ ನದಿ ತೀರದ ನಿವಾಸಿಗಳೆಲ್ಲರಿಗೂ ಸೂಚನೆ ನೀಡಿರುವ ತಾಡೆಪಲ್ಲಿ ತಹಶೀಲ್ದಾರ ವಿ. ಶ್ರೀನಿವಾಸುಲು ರೆಡ್ಡಿ ಅವರು ಅಂಥದ್ದೇ ನೋಟಿಸ್ ಒಂದನ್ನು ನಾಯ್ಡು ಅವರ ಮನೆಯ ಗೋಡೆಗೆ ಅಂಟಿಸಿದ್ದಾರೆ.
ತಹಶೀಲ್ದಾರರ ಕ್ರಮವನ್ನು ಸಮರ್ಥಿಸಿಕೊಂಡಿರುವ ವೈಎಸ್‌ಆರ್ ಕಾಂಗ್ರೆಸ್‌ನ ವಕ್ತಾರ ಅಂಬಟಿ ರಾಂಬಾಬು, ‘ನಾಯ್ಡು ಅವರು ನೆಲೆಸಿರುವ ಮನೆಯನ್ನು ನದಿ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ. ಅವರು ಮನೆಯನ್ನು ಖಾಲಿ ಮಾಡದಿದ್ದರೆ ಪ್ರಕೃತಿಯ ಸಿಟ್ಟನ್ನು ಎದುರಿಸುವುದು ಅನಿವಾರ್ಯವಾಗು
ತ್ತದೆ’ ಎಂದಿದ್ದಾರೆ.
‘ಪ್ರವಾಹಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ನೂರಾರು ಜನರನ್ನು ಬಿಟ್ಟು, ಸರ್ಕಾರವು ನಾಯ್ಡು ಅವರ ಮನೆಯ ಮೇಲೆ ಕಣ್ಣಿಟ್ಟಿದೆ. ಮುಖ್ಯಮಂತ್ರಿ ಜಗನ್ ಮೋಹನ್ ಅವರು ವೈಯಕ್ತಿಕ ದ್ವೇಷ ಸಾಧನೆಗೆ ಒತ್ತು ನೀಡುತ್ತಿದ್ದಾರೆ. ಪ್ರವಾಹ ಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಟಿಡಿಪಿ ವಕ್ತಾರ ಬೊಂಡ ಉಮಾಮಹೇಶ್ವರ್ ಆರೋಪಿಸಿದ್ದಾರೆ.
ಬಿಜೆಪಿಯು ಇಬ್ಬರು ನಾಯಕರನ್ನೂ ಟೀಕಿಸಿದೆ. ‘ಪ್ರವಾಹ ಸ್ಥಿತಿಯನ್ನು ಕಡೆಗಣಿಸಿ ಮುಖ್ಯಮಂತ್ರಿ ಅಮೆರಿಕಕ್ಕೆ ಹೋದರೆ, ಚಂದ್ರಬಾಬು ನಾಯ್ಡು ಹೈದರಾಬಾದ್‌ಗೆ ಹೋಗಿ ರಕ್ಷಣೆ ಪಡೆದಿದ್ದಾರೆ’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ. ಲಕ್ಷ್ಮಿ ನಾರಾಯಣ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.