ನವದೆಹಲಿ: ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್ ಎಂಟ್ರಿ’ ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಹೊರಡಿಸಿದ್ದ ಜಾಹೀರಾತನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವು ಮಂಗಳವಾರ ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಸೂಚಿಸಿದೆ.
ಕೇಂದ್ರ ಸಿಬ್ಬಂದಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಸಂಬಂಧ ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸೂದನ್ ಅವರಿಗೆ ಪತ್ರ ಬರೆದಿದ್ದು, ಹಿಂದುಳಿದ ಸಮುದಾಯದವರೂ ಸರ್ಕಾರಿ ಉದ್ಯೋಗಗಳಲ್ಲಿ ತಮ್ಮ ಪ್ರಾತಿನಿಧ್ಯ ಪಡೆಯಬೇಕಿರುವುದರಿಂದ ‘ಲ್ಯಾಟರಲ್ ಎಂಟ್ರಿ’ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಡುವಂತೆ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ 45 ಹುದ್ದೆಗಳಿಗೆ ನೇಮಕಾತಿ ಸಂಬಂಧ ಯುಪಿಎಸ್‌ಸಿ, ಆಗಸ್ಟ್ 17ರಂದು ಜಾಹೀರಾತು ಪ್ರಕಟಿಸಿತ್ತು. ಖಾಸಗಿ ವಲಯದವರೂ ಒಳಗೊಂಡಂತೆ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್ ಎಂಟ್ರಿ’ ಮೂಲಕ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿತ್ತು. 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪ ಕಾರ್ಯದರ್ಶಿ ಹುದ್ದೆಗಳಿಗೆ ಆರ್ಜಿಗಳನ್ನು ಆಹ್ವಾನಿಸಿತ್ತು.
‘ಲ್ಯಾಟರಲ್ ಎಂಟ್ರಿ’ ನೇಮಕಾತಿಗೆ ಮುಂದಾಗಿರುವ ಸರ್ಕಾರವು ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿಗಳಿಗಿರುವ ಮೀಸಲಾತಿಯನ್ನು ಬಹಿರಂಗವಾಗಿಯೇ ಕಸಿದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
‘ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಎಂಬುದು ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಮತ್ತು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ಆದರೆ ‘ಲ್ಯಾಟರಲ್ ಎಂಟ್ರಿ’ ನೇಮಕಾತಿಗಳಲ್ಲಿ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಪ್ರಧಾನಿ ಅವರು ಸಾಮಾಜಿಕ ನ್ಯಾಯದ ಪರ ಇರುವುದರಿಂದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಜಿತೇಂದ್ರ ಸಿಂಗ್ ಅವರು ಪತ್ರದಲ್ಲಿ ಹೇಳಿದ್ದಾರೆ.
‘ಆದ್ದರಿಂದ ಆಗಸ್ಟ್ 17ರಂದು ಹೊರಡಿಸಿದ್ದ ಜಾಹೀರಾತನ್ನು ರದ್ದುಗೊಳಿಸುವಂತೆ ಯುಪಿಎಸ್‌ಸಿಯನ್ನು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಸ್‌ಸಿ ಎಸ್‌ಟಿ ಮತ್ತು ಇತರೆ ಹಿಂದುಳಿದ ಸಮುದಾಯಗಳೆಡೆಗಿನ ಬದ್ಧತೆಯನ್ನು ಪುನರುಚ್ಚರಿಸಿದೆ-ಚಿರಾಗ್ ಪಾಸ್ವಾನ್, ಕೇಂದ್ರ ಸಚಿವ
ಸಂವಿಧಾನದ ಶಕ್ತಿಯು 'ಸರ್ವಾಧಿಕಾರಿ ಆಡಳಿತದ ದುರಹಂಕಾರ'ವನ್ನು ಸೋಲಿಸಬಲ್ಲದು ಎಂಬುದನ್ನು ಈ ಬೆಳವಣಿಗೆಯು ತೋರಿಸಿಕೊಟ್ಟಿದೆ.- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಸಂವಿಧಾನ ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುತ್ತೇವೆ. ಬಿಜೆಪಿಯ 'ಲ್ಯಾಟರಲ್ ಎಂಟ್ರಿ’ ಪಿತೂರಿಯನ್ನು ವಿಫಲಗೊಳಿಸುತ್ತೇವೆ.-ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಹಿಂದುಳಿದ ವರ್ಗದವರು ದಲಿತರು ಮತ್ತು ಅಲ್ಪಸಂಖ್ಯಾತರು ತೋರಿದ ಒಗ್ಗಟ್ಟಿನ ಮುಂದೆ ಕೇಂದ್ರ ಸರ್ಕಾರ ಕೊನೆಗೂ ಮಂಡಿಯೂರಿದೆ- ಅಖಿಲೇಶ್ ಯಾದವ್, ಎಸ್‌ಪಿ ಅಧ್ಯಕ್ಷ
ಹೋರಾಟಕ್ಕೆ ಸಂದ ಜಯ: ಕಾಂಗ್ರೆಸ್
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಾಯಕರ ವಿರೋಧದಿಂದಾಗಿ ಕೇಂದ್ರ ಸರ್ಕಾರವು ‘ಲ್ಯಾಟರಲ್ ಎಂಟ್ರಿ’ ನೇಮಕಾತಿಯಿಂದ ಹಿಂದೆ ಸರಿದಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ ‘ಸಂವಿಧಾನಕ್ಕೆ ಜಯವಾಗಲಿ. ದಲಿತರು ಬುಡಕಟ್ಟು ಜನರು ಹಿಂದುಳಿದ ಮತ್ತು ದುರ್ಬಲ ವರ್ಗದವರ ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷವು ನಡೆಸಿರುವ ಹೋರಾಟವು ಮೀಸಲಾತಿ ಕಸಿದುಕೊಳ್ಳುವ ಬಿಜೆಪಿಯ ಯೋಜನೆಗಳನ್ನು ವಿಫಲಗೊಳಿಸಿದೆ’ ಎಂದಿದ್ದಾರೆ. ‘ಆದರೆ ಬಿಜೆಪಿ-ಆರ್‌ಎಸ್‌ಎಸ್ ಅಧಿಕಾರದಲ್ಲಿರುವವರೆಗೂ ಮೀಸಲಾತಿಯನ್ನು ಕಸಿದುಕೊಳ್ಳಲು ಹೊಸ ತಂತ್ರಗಳನ್ನು ಅನುಸರಿಸುತ್ತಲೇ ಇರುತ್ತಾರೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.