ADVERTISEMENT

‘ಲ್ಯಾಟರಲ್ ಎಂಟ್ರಿ’ ಮೂಲಕ ನೇಮಕ ಜಾಹೀರಾತು ರದ್ದು ಮಾಡಿ: UPSCಗೆ ಕೇಂದ್ರ ಪತ್ರ

ಪಿಟಿಐ
Published 20 ಆಗಸ್ಟ್ 2024, 9:33 IST
Last Updated 20 ಆಗಸ್ಟ್ 2024, 9:33 IST
upsc
upsc   

ನವದೆಹಲಿ: ‘ಲ್ಯಾಟರಲ್ ಎಂಟ್ರಿ’ ಮೂಲಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಕುರಿತಾದ ಇತ್ತೀಚಿನ ಜಾಹೀರಾತನ್ನು ರದ್ದು ಮಾಡುವಂತೆ ಕೇಂದ್ರ ಲೋಕಸೇವಾ ಆಯೋಗಕ್ಕೆ(ಯುಪಿಎಸ್‌ಸಿ) ಕೇಂದ್ರ ಸರ್ಕಾರ ಸೂಚಿಸಿದೆ.

‘ಲ್ಯಾಟರಲ್ ಎಂಟ್ರಿ’ ಮೂಲಕ ಅಧಿಕಾರಿಗಳ ನೇಮಕದಲ್ಲಿ ಮೀಸಲಾತಿಗೆ ಧಕ್ಕೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ಕೈಗೊಂಡಿದೆ.

ಕೇಂದ್ರದ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸೂದನ್‌ ಅವರಿಗೆ ಪತ್ರ ಬರೆದಿದ್ದು, ಈ ಕೂಡಲೇ ಜಾಹೀರಾತನ್ನು ರದ್ದು ಮಾಡುವ ಮೂಲಕ ದಮನಿತ ಸಮುದಾಯಗಳ ಜನರು ಸರ್ಕಾರಿ ಸೇವೆಗಳಲ್ಲಿ ನ್ಯಾಯಸಮ್ಮತವಾಗಿ ತಮ್ಮ ಪ್ರಾತಿನಿಧ್ಯವನ್ನು ಪಡೆಯಲು ಅವಕಾಶ ನೀಡುವಂತೆ ಸೂಚಿಸಿದ್ದಾರೆ.

ADVERTISEMENT

‘ಲ್ಯಾಟರಲ್ ಎಂಟ್ರಿ’ ಮೂಲಕ ಕೇಂದ್ರ ಲೋಕಸೇವಾ ಆಯೋಗಕ್ಕೆ(ಯುಪಿಎಸ್‌ಸಿ) ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳೂ ಸೇರಿದಂತೆ 45 ಮಂದಿಯ ನೇಮಕಾತಿ ಕುರಿತಂತೆ ಶನಿವಾರ ಯುಪಿಎಸ್‌ಸಿ ನೋಟಿಫಿಕೇಶನ್ ಹೊರಡಿಸಿತ್ತು. ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್‌ ಎಂಟ್ರಿ’ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಯುಪಿಎಸ್‌ಸಿ ತಿಳಿಸಿತ್ತು.

ಈ ಸಂಬಂಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ಟೀಕೆ ಮಾಡಿದ್ದವು. ಕೇಂದ್ರ ಸರ್ಕಾರವು ಲ್ಯಾಟರಲ್ ಎಂಟ್ರಿ ಅವಕಾಶವನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲು ಬಳಸುತ್ತಿದೆ. ಲೋಕಸೇವಾ ಆಯೋಗದ ಪ್ರಮುಖ ಹುದ್ದೆಗಳಿಗೆ ಆರ್‌ಎಸ್‌ಎಸ್ ಸಂಬಂಧಿತ ವ್ಯಕ್ತಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಟೀಕಿಸಿದ್ದವು.

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯು ಐತಿಹಾಸಿಕ ಅನ್ಯಾಯಗಳನ್ನು ಪರಿಹರಿಸುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ನಮ್ಮ ಸಾಮಾಜಿಕ ನ್ಯಾಯದ ಚೌಕಟ್ಟಿನ ಮೂಲಾಧಾರವಾಗಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯವಾಗಿದೆ ಎಂದು ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 2024ರ ಆಗಸ್ಟ್‌ 17ರಂದು ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಕುರಿತು ಬಿಡುಗಡೆ ಮಾಡಲಾಗಿರುವ ಜಾಹೀರಾತನ್ನು ರದ್ದು ಮಾಡುವಂತೆ ಯುಪಿಎಸ್‌ಸಿಯನ್ನು ನಾನು ಒತ್ತಾಯಿಸುತ್ತೇನೆ ಎಂದೂ ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ದೃಷ್ಟಿಯಿಂದ ಈ ನಿರ್ಣಯ ಅತ್ಯಂತ ಪ್ರಮುಖವಾದುದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.