ನವದೆಹಲಿ: ಗುಪ್ತಚರ ಮತ್ತು ಭದ್ರತೆಗೆ ಸಂಬಂಧಿಸಿದ ಇಲಾಖೆಗಳಲ್ಲಿ/ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ‘ಸೂಕ್ಷ್ಮ ಮಾಹಿತಿ’ಗಳನ್ನು ಪ್ರಕಟಿಸದಂತೆ ತಡೆಯುವ ಮೂಲಕ ಕೇಂದ್ರ ಸರ್ಕಾರ ಈ ಹಿಂದಿನ ತನ್ನ ನಿಯಮಗಳಿಗೆ ತಿದ್ದುಪಡಿ ತಂದಿದೆ.
ಹೊಸ ನಿಯಮಾವಳಿಗಳಲ್ಲಿ, ಆ ಸಂಸ್ಥೆಯಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ಸಂಸ್ಥೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂಬ ಷರತ್ತುಗಳನ್ನು ಸೇರಿಸಲಾಗಿದೆ. ಒಂದು ವೇಳೆ ಇಂಥ ಮಾಹಿತಿಗಳನ್ನು ಪ್ರಕಟಿಸಬೇಕೆನಿಸಿದರೆ, ಸಂಸ್ಥೆಯ ಮುಖ್ಯಸ್ಥರಿಂದ ಪೂರ್ವಾನುಮತಿ ಪಡೆಯಬೇಕು ಎಂದು ಷರತ್ತುಗಳಲ್ಲಿ ಸೇರಿಸಲಾಗಿದೆ. 2007ರಿಂದ ಜಾರಿಯಲ್ಲಿದ್ದ ಈ ಹಿಂದಿನ ನಿಯಮದಂತೆ ಸಂಸ್ಥೆಯ ಮುಖ್ಯಸ್ಥರ ಬದಲಿಗೆ ವಿಭಾಗದ ಮುಖ್ಯಸ್ಥರಿಂದ ಅನುಮತಿ ಪಡೆದರೆ ಸಾಕಾಗಿತ್ತು.
ಮೇ 31ರಂದು ಪ್ರಕಟವಾದ ‘ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ತಿದ್ದುಪಡಿ ನಿಯಮಗಳು, 2021’ ಅನ್ನು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ.
ಹೊಸ ನಿಯಮಗಳ ಪ್ರಕಾರ, ಸಂಸ್ಥೆಯ ಮುಖ್ಯಸ್ಥರಿಗೆ ಎಲ್ಲ ರೀತಿಯ ಜವಾಬ್ದಾರಿಯನ್ನು ನೀಡಲಾಗಿದೆ. ಯಾವುದೇ ಮಾಹಿತಿಯನ್ನು ಸಂಸ್ಥೆಯ ಮುಖ್ಯಸ್ಥರ ಅನುಮತಿಯಿಲ್ಲದೇ ಪ್ರಕಟಿಸಿದರೆ, ಅಂಥವರ ಪಿಂಚಣಿಯನ್ನು ತಡೆ ಹಿಡಿಯುವ ಅಥವಾ ಹಿಂತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.