ನವದೆಹಲಿ: ಮುಂದಿನ ಜನಗಣತಿಯ ಪ್ರಶ್ನಾವಳಿಯಲ್ಲಿ ಹೆಚ್ಚುವರಿ ಒಂದು ಕಾಲಂ ಸೇರಿಸುವ ಮೂಲಕ ಒಬಿಸಿ ಜನಸಂಖ್ಯೆಯ ಜಾತಿವಾರು ದತ್ತಾಂಶ ಸಂಗ್ರಹಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಸಲಹೆ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೇಂದ್ರ ಸರ್ಕಾರ ಜನಗಣತಿ ನಡೆಸಲು ಯೋಜಿಸುತ್ತಿದೆ ಎನ್ನುವ ಕುರಿತು ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಭಾರತವು ಪ್ರತಿ ಹತ್ತು ವರ್ಷಗಳಿಗೊಮ್ಮೆ ನಿಯಮಿತವಾಗಿ ಜನಗಣತಿಯನ್ನು ನಡೆಸುತ್ತಿದೆ. ಜನಗಣತಿಯು 2021 ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಜನಗಣತಿ ನಡೆದಿರಲಿಲ್ಲ ಎಂದಿದ್ದಾರೆ.
‘ಜಾತಿಗಣತಿ ನಡೆಯದ ಪರಿಣಾಮ, ಆರ್ಥಿಕ ಯೋಜನೆ ಮತ್ತು ಸಾಮಾಜಿಕ ನ್ಯಾಯಕ್ಕೆ ಅಗತ್ಯವಾದ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರ ವಿಫಲವಾಗಿದೆ. ಇದರಿಂದಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ– 2013 ಅಥವಾ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಂತಹ ಯೋಜನೆಗಳಿಂದ 12 ಕೋಟಿಗೂ ಹೆಚ್ಚು ಭಾರತೀಯ ವಂಚಿತರಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘1951ರಿಂದಲೂ ಪ್ರತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಮೇಲೆ ಜಾತಿವಾರು ಡೇಟಾವನ್ನು ಸಂಗ್ರಹಿಸುತ್ತಿದೆ. ಈಗ ಹೆಚ್ಚುವರಿಯಾಗಿ ಒಂದು ಕಾಲಂ ಸೇರಿಸುವ ಮೂಲಕ ಒಬಿಸಿ ಜನಸಂಖ್ಯೆಯ ಜಾತಿವಾರು ದತ್ತಾಂಶವನ್ನು ಸಹ ಸಂಗ್ರಹಿಸಬಹುದು. ಇದರಿಂದಾಗಿ ಜಾತಿ ಗಣತಿಯ ಬೇಡಿಕೆಯನ್ನು ಒಂದು ಹಂತಕ್ಕೆ ಈಡೇರಿಸಿದಂತಾಗುತ್ತದೆ. ಜತೆಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನ್ಯಾಯ ಒದಗಿಸಲು ಇದು ದಾರಿ ಮಾಡಿಕೊಡಲಿದೆ ಎಂದು ರಮೇಶ್ ಸಲಹೆ ನೀಡಿದ್ದಾರೆ. ಈ ಮೂಲಕ ಜನಗಣತಿಯ ಜತೆಗೆ ಜಾತಿಗಣತಿಯನ್ನೂ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.