ADVERTISEMENT

ರಫ್ತು ಮಾಡಲಾಗುವ ಮಸಾಲೆ ಪದಾರ್ಥಗಳ ಗುಣಮಟ್ಟ ಪರೀಕ್ಷೆಗೆ ಮಾನದಂಡ

​ಪ್ರಜಾವಾಣಿ ವಾರ್ತೆ
Published 20 ಮೇ 2024, 15:53 IST
Last Updated 20 ಮೇ 2024, 15:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಫ್ತು ಮಾಡಲಾಗುವ ಮಸಾಲೆ ಪದಾರ್ಥಗಳಲ್ಲಿ ಇಥೈಲೀನ್‌ ಆಮ್ಲದ (ಇಟಿಒ) ಅಂಶವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಸ್ತೃತ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಭಾರತದ ಎಂಡಿಎಚ್‌ ಮತ್ತು ಎವರೆಸ್ಟ್‌ ಸಂಸ್ಥೆಗಳ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಇಟಿಒ ಅಂಶ ಹೆಚ್ಚಾಗಿ ಇರುವ ಕಾರಣ ಉತ್ಪನ್ನಗಳನ್ನು ಹಿಂಪಡೆಯುವಂತೆ ಸಿಂಗಪುರ ಮತ್ತು ಹಾಂಗ್‌ಕಾಂಗ್‌ ಈ ಸಂಸ್ಥೆಗಳಿಗೆ ಹೇಳಿತ್ತು ಎಂದು ಈಚೆಗಷ್ಟೇ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮವು ಮಹತ್ವ ಪಡೆದಿದೆ. ಇದೇ ವೇಳೆ, ಸಿಂಗಪುರ, ಹಾಂಗ್‌ಕಾಂಗ್‌ಗಳಿಗೆ ರಫ್ತು ಮಾಡಲಾಗುವ ಮಸಾಲೆ ಪದಾರ್ಥಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂಥ ಕ್ರಮವನ್ನೂ ಕೇಂದ್ರ ಕೈಗೆತ್ತಿಕೊಂಡಿದೆ.  

‘ಸಿಂಗಪುರ ಮತ್ತು ಹಾಂಗ್‌ಕಾಂಗ್‌ಗೆ ರಫ್ತು ಮಾಡಲಾಗುವ ಮಸಾಲೆ ಪದಾರ್ಥಗಳನ್ನು ಹಡಗಿನಲ್ಲಿ ಇರಿಸುವ ಮೊದಲೇ ಪರೀಕ್ಷೆಗೊಳಪಡಿಸುವುದನ್ನು ಈಗಾಗಲೇ ಆರಂಭಿಸಲಾಗಿದೆ. ಇಟಿಒ ಅಂಶವು ಮಸಾಲೆ ಪದಾರ್ಥದಲ್ಲಿ ಇರದಂತೆ ನೋಡಿಕೊಳ್ಳಲು ಎಲ್ಲಾ ರಫ್ತುದಾರರಿಗೂ ಹೇಳಲಾಗಿದೆ. ನಿರಂತರ ಪರೀಕ್ಷಾ ಪ್ರಕ್ರಿಯೆಯನ್ನೂ ರಫ್ತುದಾರರು ಕೈಗೊಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇಟಿಒಗೆ ಸಂಬಂಧಿಸಿದ ಗರಿಷ್ಠ ರಾಸಾಯನಿಕ ಉಳಿಕೆ ಮಟ್ಟ (ಎಂಆರ್‌ಎಲ್‌) ಮಾನದಂಡವು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಉದಾಹರಣೆಗೆ ಯುರೋಪ್‌ ಒಕ್ಕೂಟವು ಇಟಿಒ ಮಾನದಂಡವನ್ನು 1 ಕೆ.ಜಿ. ಗೆ 0.02 ಇಂದ 0.1 ಎಂಜಿ ಇರಿಸಿದೆ. ಸಿಂಗಪುರ ಮತ್ತು ಜಪಾನ್‌ ಕ್ರಮವಾಗಿ 1 ಕೆ.ಜಿ.ಗೆ 50 ಎಂಜಿ ಮತ್ತು 0.01 ಎಂಜಿ ಹೊಂದಿವೆ. ಹೀಗಾಗಿ ಇಟಿಒ ಬಳಕೆಗೆ ಅಂತರರಾಷ್ಟ್ರೀಯ ಮಾನದಂಡ ಎಂಬುದಿಲ್ಲ.

ಆಹಾರ ಪದಾರ್ಥ ಪರೀಕ್ಷೆ ಕುರಿತು ಮಾಹಿತಿ ನೀಡಿದ ಮತ್ತೊಬ್ಬ ಅಧಿಕಾರಿ, ಆಹಾರ ಪದಾರ್ಥಗಳು ಪರೀಕ್ಷೆಯಲ್ಲಿ ವಿಫಲ ಎಂದು ಪರಿಗಣಿಸುವುದಕ್ಕೆ ನಿರ್ದಿಷ್ಟ ಮಾನದಂಡ ಇರುತ್ತದೆ. ಭಾರತದ ಆಹಾರ ಪದಾರ್ಥ ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗುವ ದರವು ಶೇ 1ಕ್ಕಿಂತ ಕಡಿಮೆ ಎಂದರು.

2023– 24ನೇ ಸಾಲಿನಲ್ಲಿ 14 ಲಕ್ಷ ಟನ್‌ ಮಸಾಲೆ ಪದಾರ್ಥಗಳನ್ನು ವಿವಿಧ ದೇಶಕ್ಕೆ ರಫ್ತು ಮಾಡಲಾಯಿತು. ಅದರಲ್ಲಿ ಶೇ 99.8ರಷ್ಟು ಪದಾರ್ಥವು ಗುಣಮಟ್ಟ ಪರೀಕ್ಷೆಗಳನ್ನು ತೇರ್ಗಡೆಯಾಗಿವೆ. ಇದೇ ವೇಳೆ, ಭಾರತಕ್ಕೆ ಆಮದಾಗುವ ಶೇ 0.73ರಷ್ಟು ಆಹಾರ ಪದಾರ್ಥಗಳು ಗುಣಮಟ್ಟ ಮಾನದಂಡವನ್ನು ತೇರ್ಗಡೆಯಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.