ನವದೆಹಲಿ: ತಂತ್ರಜ್ಞಾನ ಕ್ಷೇತ್ರದ ಪ್ರಯೋಜನ ದೇಶದ ಎಲ್ಲ ಪ್ರಜೆಗಳಿಗೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ಆಧುನಿಕ ತಂತ್ರಜ್ಞಾನವು ಪ್ರತಿುಯೊಬ್ಬರಿಗೂ ಲಭ್ಯವಾಗಬೇಕು ಹಾಗೂ ಅದು ಕೈಗೆಟುಕುಂತಿರಬೇಕು ಎಂಬ ತತ್ವವೇ ಈ ಕಾರ್ಯಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದೂ ಹೇಳಿದರು.
91 ಎಫ್.ಎಂ ಟ್ರಾನ್ಸ್‌ಮಿಟರ್‌ಗಳಿಗೆ ವರ್ಚುವಲ್ ವಿಧಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
‘ಭಾರತವು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಸಾಧಿಸಬೇಕು. ಇದು ಸಾಧ್ಯವಾಗಬೇಕಾದರೆ, ತನಗೆ ಅವಕಾಶಗಳ ಕೊರತೆ ಇದೆ ಎಂಬ ಭಾವನೆ ದೇಶದ ಯಾವ ಪ್ರಜೆಯಲ್ಲಿಯೂ ಬರಬಾರದು’ ಎಂದು ಮೋದಿ ಹೇಳಿದರು.
‘ಇಂಟರ್‌ನೆಟ್‌ನಿಂದಾಗಿ ಪಾಡ್‌ಕಾಸ್ಟ್‌ಗಳು ಹಾಗೂ ಆನ್‌ಲೈನ್ ಎಫ್‌ಎಂ ಸೇವೆ ಜನಪ್ರಿಯಗೊಂಡಿವೆ. ಡಿಜಿಟಲ್ ಇಂಡಿಯಾ ಉಪಕ್ರಮದಿಂದಾಗಿ ರೇಡಿಯೊ ಕೇಳುಗರ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡುಬಂದಿಲ್ಲ, ವೈಚಾರಿಕತೆಗೆ ಹೊಸ ರೂಪ ಸಿಕ್ಕಿದೆ. ಇಂಥ ಕ್ರಾಂತಿಕಾರಕ ಬದಲಾವಣೆಯನ್ನು ಎಲ್ಲ ಪ್ರಕಾರದ ಪ್ರಸಾರ ಮಾಧ್ಯಮಗಳಲ್ಲಿ ಕಾಣಬಹುದು’ ಎಂದರು.
‘ಶಿಕ್ಷಣ, ಮನರಂಜನೆಯಿಂದ ದಶಕಗಳಿಂದ ವಂಚಿತರಾದವರಿಗೂ ಈ ಸೌಲಭ್ಯಗಳು ಸಿಗುತ್ತಿವೆ. ಡಿಟಿಎಚ್ ಮೂಲಕ ಹಲವಾರು ಕೋರ್ಸ್‌ಗಳು ಲಭ್ಯವಾಗುವಂತೆ ಮಾಡಲಾಗಿದೆ. ಸಂವಹನವು ಜನರನ್ನೂ ಬೆಸೆಯುತ್ತದೆ ಎಂಬುದು ಸಾಬೀತಾಗಿದೆ. ಸಾಂಸ್ಕೃತಿಕ ಹಾಗೂ ಬೌದ್ಧಿಕ ಸಂಪರ್ಕಕ್ಕೂ ನಮ್ಮ ಸರ್ಕಾರ ಉತ್ತೇಜನ ನೀಡುತ್ತಿದೆ’ ಎಂದರು.
‘ಮನ್ ಕಿ ಬಾತ್’ ಬಾನುಲಿ ಸರಣಿ ಪ್ರಸ್ತಾಪಿಸಿದ ಅವರು, ಜನರೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಲು ನೆರವಾದ ಬಗೆಯನ್ನು ವಿವರಿಸಿದರು. ‘ಈ ಕಾರ್ಯಕ್ರಮದ ಮೂಲಕ ನಾನು ಆಕಾಶವಾಣಿ ತಂಡದ ಭಾಗವಾಗಿದ್ದೇನೆ’ ಎಂದು ಹೇಳಿದರು.
84 ಜಿಲ್ಲೆಗಳಲ್ಲಿ ಸ್ಥಾಪನೆ: 18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು, ಪದ್ಮ ಪ್ರಶಸ್ತಿ ಪುರಸ್ಕೃತರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 84 ಜಿಲ್ಲೆಗಳಲ್ಲಿ ಈ ಎಫ್.ಎಂ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಿ ಮೋದಿ ಅವರು ಮಾಸಿಕ ಬಾನುಲಿ ಸರಣಿ ‘ಮನ್ ಕಿ ಬಾತ್’ 100ನೇ ಕಂತು ಪ್ರಸಾರವಾಗುವ ಎರಡು ದಿನ ಮೊದಲು ಈ ಟ್ರಾನ್ಸ್‌ಮಿಟರ್‌ಗಳಿಗೆ ಚಾಲನೆ ನೀಡುತ್ತಿರುವುದು ಗಮನಾರ್ಹ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಲಡಾಖ್‌ನಿಂದ ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.