ADVERTISEMENT

ಗರಿಷ್ಠ ಯುವಜನರಿಗೆ ಉದ್ಯೋಗ ಕಲ್ಪಿಸಲು ಬದ್ಧ; ಪ್ರಧಾನಿ ಮೋದಿ

ದೇಶ ಹಿಂದುಳಿಯಲು ಹಿಂದಿನ ಸರ್ಕಾರಗಳ ಅಸ್ಪಷ್ಟ ನೀತಿ, ಉದ್ದೇಶದ ಕೊರತೆಯೇ ಕಾರಣ –ಪ್ರಧಾನಿ ಟೀಕೆ

ಪಿಟಿಐ
Published 29 ಅಕ್ಟೋಬರ್ 2024, 14:05 IST
Last Updated 29 ಅಕ್ಟೋಬರ್ 2024, 14:05 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)&nbsp;</p></div>

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) 

   

ಪಿಟಿಐ

ನವದೆಹಲಿ: ‘ಗರಿಷ್ಠ ಯುವಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಎಲ್ಲರಿಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಅವಕಾಶ ಕಲ್ಪಿಸುವ ವಾತಾವರಣವನ್ನು ಸೃಷ್ಟಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಇಲ್ಲಿ ನಡೆದ ‘ಉದ್ಯೋಗ ಮೇಳ’ದಲ್ಲಿ 51 ಸಾವಿರಕ್ಕೂ ಅಧಿಕ ಮಂದಿಗೆ ಸರ್ಕಾರಿ ನೌಕರಿಯ ನೇಮಕಾತಿ ಪತ್ರ ವಿತರಿಸಿದ ಅವರು, ‘ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಅಂತರಿಕ್ಷ, ಸೆಮಿ ಕಂಡಕ್ಟರ್ ಸೇರಿ ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಸರ್ಕಾರ ಒತ್ತು ನೀಡಲಿದೆ’ ಎಂದರು.

ವಿಡಿಯೊ ಭಾಷಣದಲ್ಲಿ ಅವರು, ‘ಹಿಂದಿನ ಸರ್ಕಾರಗಳಲ್ಲಿ ಸ್ಪಷ್ಟ ನೀತಿ, ಉದ್ದೇಶದ ಕೊರತೆ ಇತ್ತು. ಇದರ ಪರಿಣಾಮ, ಪ್ರವರ್ಧಮಾನಕ್ಕೆ ಬರುತ್ತಿರುವ ಹಲವು ಕ್ಷೇತ್ರಗಳಲ್ಲಿ ದೇಶ ಹಿಂದುಳಿಯಿತು. ಹಳೆಯ, ಅಪ್ರಸ್ತುತ ತಂತ್ರಜ್ಞಾನಗಳನ್ನೇ ಇಲ್ಲಿಗೆ ತರಲಾಯಿತು’ ಎಂದು ಹೇಳಿದರು. 

‘ಹೊಸ ತಂತ್ರಜ್ಞಾನಗಳಿಂದ ದೇಶ ಪ್ರಗತಿಯಾಗದು ಎಂಬ ಮನಃಸ್ಥಿತಿ ಇತ್ತು. ಈ ಮನಃಸ್ಥಿತಿಯೇ ದೊಡ್ಡ ಪೆಟ್ಟು ನೀಡಿತು. ಆಧುನಿಕ ತಂತ್ರಜ್ಞಾನ ಆಧಾರಿತ ಉದ್ಯಮಗಳು ಸ್ಥಾಪನೆಯಾಗದೇ ಹೊಸ ಉದ್ಯೋಗಾವಕಾಶ ಸೃಷ್ಟಿಸುವುದು ಕಷ್ಟಸಾಧ್ಯವಾಗಲಿದೆ’ ಎಂದು ಪ್ರತಿಪಾದಿಸಿದರು.

‘ಹಿಂದಿನ ಸರ್ಕಾರಗಳ ಹಳೆಯ ಮನಃಸ್ಥಿತಿಯಿಂದ ದೇಶವನ್ನು ಹೊರತಲು ನಾವು ಕ್ರಮವಹಿಸಿದೆವು. ಸರ್ಕಾರದ ನೀತಿ ಮತ್ತು ನಿರ್ಧಾರಗಳು ಈಗ ನೇರವಾಗಿ ಉದ್ಯೋಗಾವಕಾಶ ಸೃಷ್ಟಿಸುವುದಕ್ಕೆ ಪೂರಕವಾಗಿವೆ’ ಎಂದು ಹೇಳಿದರು.

ಎಕ್ಸ್‌ಪ್ರೆಸ್‌ ವೇಗಳು, ಹೆದ್ದಾರಿ, ಬಂದರು, ರೈಲು ಸಂಪರ್ಕ ಜಾಲ, ವಿಮಾನನಿಲ್ದಾಣಗಳ ನಿರ್ಮಾಣ ಚಟುವಟಿಕೆ ದೇಶದಲ್ಲಿ ಚಾಲ್ತಿಯಲ್ಲಿವೆ ಎಂದ ಅವರು, ‘ಗರಿಷ್ಠ ಸಂಖ್ಯೆಯ ಯುವಜನರಿಗೆ ಉದ್ಯೋಗ ಕಲ್ಪಿಸುವುದು ಈ ಸರ್ಕಾರದ ಬದ್ಧತೆ’ ಎಂದು ಭರವಸೆ ನೀಡಿದರು.

ಅನಿಲ, ನೀರು ಸಂಪರ್ಕ ಕೊಳವೆ ಮಾರ್ಗಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಶಾಲೆ, ವಿಶ್ವವಿದ್ಯಾಲಯಗಳು ಆರಂಭವಾಗುತ್ತಿವೆ. ಅಭಿವೃದ್ಧಿ ಕಾರ್ಯಗಳು ಜನರಿಗೆ ಮೂಲಸೌಲಭ್ಯವನ್ನಷ್ಟೇ ಒದಗಿಸುವುದಿಲ್ಲ, ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿವೆ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.