ADVERTISEMENT

ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಪಿಟಿಐ
Published 14 ಮೇ 2024, 10:38 IST
Last Updated 14 ಮೇ 2024, 10:38 IST
   

ನವದೆಹಲಿ: ತಮಿಳುನಾಡು ಒಳಗೊಂಡಂತೆ ದೇಶದಲ್ಲಿ ಪ್ರತ್ಯೇಕ ದೇಶ ಬೇಡಿಕೆಯ ಪ್ರವೃತ್ತಿ ಬಿತ್ತುತ್ತಿರುವ ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಉದ್ದೇಶ ಹೊಂದಿರುವ ಎಲ್‌ಟಿಟಿಇ ಸಂಘಟನೆ ಮೇಲಿನ ನಿಷೇಧವನ್ನು ಮುಂದಿನ ಐದು ವರ್ಷಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.

‘ಎಲ್‌ಟಿಟಿಇ ಶ್ರೀಲಂಕಾ ಮೂಲದ್ದೇ ಆದರೂ, ಅದರ ಬೆಂಬಲಿಗರು ಮತ್ತು ಏಜೆಂಟರು ಭಾರತದ ನೆಲದೊಳಗೆ ಇದ್ದಾರೆ. ಇವರ ಕಾರ್ಯಾಚರಣೆ ಈಗಲೂ ದೇಶದೊಳಗೆ ನಡೆಯುತ್ತಿರುವ ಸಾಧ್ಯತೆ ಇದ್ದು, ಇದು ಭಾರತದ ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆಯುಂಟು ಮಾಡುವ ಅಪಾಯವಿದೆ’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

‘2009ರಲ್ಲಿ ಶ್ರೀಲಂಕಾದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಪರಾಭವಗೊಂಡ ಬಳಿಕವೂ, ತಮಿಳರ ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆ (ಈಳಂ)ಯಿಂದ ಎಲ್‌ಟಿಟಿಇ ವಿಮುಖವಾಗಿಲ್ಲ. ಈ ನಿಟ್ಟಿನಲ್ಲಿ ನಿಧಿ ಸಂಗ್ರಹ ಮತ್ತು ಪ್ರಚಾರ ಕಾರ್ಯದಲ್ಲಿ ಈ ಸಂಘಟನೆಯ ಮುಖಂಡರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹರಿದು ಹಂಚಿಹೋಗಿರುವವರನ್ನು ಸಂಘಟಿಸಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದಿದೆ.

ADVERTISEMENT

‘ಎಲ್‌ಟಿಟಿಇ ಪರಾಭವಕ್ಕೆ ಭಾರತವೇ ಕಾರಣ ಎಂಬ ದೇಶ ವಿರೋಧಿ ಹೇಳಿಕೆಗಳನ್ನು ಎಲ್‌ಟಿಟಿಇ ಬೆಂಬಲಿಗರು ಹರಡುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ಭಾರತದ ಸಂವಿಧಾನದ ವಿರುದ್ಧ ತಮಿಳು ಭಾಷಿಗರಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಈ ಸಂಘಟನೆ ಮಾಡುತ್ತಿದೆ. ಆ ಮೂಲಕ ಜನರನ್ನು ಗುಪ್ತವಾಗಿ ಸಂಘಟಿಸುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ತಿಳಿಸಿದೆ.

‘ದೇಶದ್ರೋಹಿ ಕೆಲಸದೊಂದಿಗೆ ಮಾದಕದ್ರವ್ಯದ ಕಳ್ಳಸಾಗಣೆ, ಶಸ್ತ್ರಾಸ್ತ್ರ ಪೂರೈಕೆಯಂತ ಅಕ್ರಮ ಚಟುವಟಿಕೆಗಳಲ್ಲೂ ಈ ಗುಂಪು ಸಕ್ರಿಯವಾಗಿದೆ. ಇವೆಲ್ಲವೂ ಈ ನೆಲದ ಕಾನೂನಿಗೆ ವಿರುದ್ಧವಾದದ್ದಾಗಿವೆ. ಹೀಗಾಗಿ ಈ ಸಂಘಟನೆ ಮೇಲಿರುವ ನಿಷೇಧವನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ’ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.

ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು 1991ರಲ್ಲಿ ಎಲ್‌ಟಿಟಿಇ ಸಂಘಟನೆ ಮಾನವಬಾಂಬ್ ಸ್ಫೋಟಿಸಿ ಹತ್ಯೆಗೈದಿತ್ತು. ಸಂಘಟನೆ ವಿರುದ್ಧ ಸಮರ ಸಾರಿದ್ದ ಶ್ರೀಲಂಕಾ ಸೇನೆಯು, 2009ರಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವೆಲುಪಿಳ್ಳೈ ಪ್ರಭಾಕರನ್ ಅವರನ್ನು ಕೊಂದು ಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.