ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಕಾರಣವಾದ ಉಗ್ರ ಸಂಘಟನೆ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ– 1967ರ ಅಡಿಯಲ್ಲಿ ನಿಷೇಧವನ್ನು ವಿಸ್ತರಿಸಿರುವುದಾಗಿ ಗೃಹ ಸಚಿವಾಲಯ ಮಂಗಳವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
1991ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದ ಬಳಿಕ ಎಲ್‌ಟಿಟಿಇ ಸಂಘಟನೆಯನ್ನು ಭಾರತ ನಿಷೇಧಿಸಿತ್ತು. ಈ ನಿಷೇಧವನ್ನು 2014ರಲ್ಲಿ ಐದು ವರ್ಷಗಳವರೆಗೆ ವಿಸ್ತರಿಸಲಾಗಿತ್ತು.
ಶ್ರೀಲಂಕಾ ಮೂಲದ ಈ ಉಗ್ರ ಸಂಘಟನೆಗೆ 1976ರಿಂದ ಭಾರತದಲ್ಲಿ ಬೆಂಬಲಿಗರು, ಸಹಾನುಭೂತಿ ಹೊಂದಿರುವವರು ಮತ್ತು ಏಜೆಂಟರು ಇದ್ದಾರೆ.
‘ಎಲ್ಲ ತಮಿಳರಿಗೂ ಪ್ರತ್ಯೇಕ ತಾಯ್ನಾಡಿನ (ತಮಿಳು ಈಳಂ) ಪ್ರಮುಖ ಉದ್ದೇಶವನ್ನು ಈ ಸಂಘಟನೆ ಹೊಂದಿದೆ. ಇದುಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಏಕತೆಗೆ ಬೆದರಿಕೆಯೊಡ್ಡುತ್ತದೆ. ಹಾಗಾಗಿ ಈ ಸಂಘಟನೆಕಾನೂನುಬಾಹಿರ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಬರುತ್ತದೆ’ ಎಂದು ಅಧಿಸೂಚನೆ ಹೇಳಿದೆ.
ಶ್ರೀಲಂಕಾದಲ್ಲಿ ಮೇ 2009ರಲ್ಲಿ ಮಿಲಿಟರಿ ಸೋಲಿನ ನಂತರವೂ ಎಲ್‌ಟಿಟಿಇ ‘ಈಳಂ’ ಪರಿಕಲ್ಪನೆ ಬಿಟ್ಟಿಲ್ಲ. ಜತಗೆ ರಹಸ್ಯವಾಗಿ ನಿಧಿ ಸಂಗ್ರಹಣೆ ಮತ್ತು ಪ್ರಚಾರ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಈ ಸಂಘಟನೆ ಗೋಪ್ಯವಾಗಿ ಕೆಲಸ ಮಾಡುತ್ತಿದೆ. ಉಳಿದಿರುವ ಎಲ್‌ಟಿಟಿಇ ಮುಖಂಡರು ಅಥವಾ ಕಾರ್ಯಕರ್ತರು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಚದುರಿದ ಕಾರ್ಯಕರ್ತರನ್ನು ಪುನಃ ಸಂಘಟಿಸಲು ಮತ್ತು ಸ್ಥಳೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಸಂಘಟನೆಯನ್ನು ಪುನರುತ್ಥಾನಗೊಳಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.