ADVERTISEMENT

ಐದು ವರ್ಷ ಎಂಎಸ್‌ಪಿ ಖಾತರಿ: ರೈತ ಮುಖಂಡರ ಮುಂದೆ ಕೇಂದ್ರ ಸರ್ಕಾರದ ಪ್ರಸ್ತಾವ

ಪಿಟಿಐ
Published 19 ಫೆಬ್ರುವರಿ 2024, 23:30 IST
Last Updated 19 ಫೆಬ್ರುವರಿ 2024, 23:30 IST
<div class="paragraphs"><p>‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ರೈತರು ಪಂಜಾಬ್–ಹರಿಯಾಣದ ಶಂಭು ಗಡಿಯಲ್ಲಿ ಸೋಮವಾರ ಧರಣಿ ನಡೆಸಿದರು </p></div>

‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ರೈತರು ಪಂಜಾಬ್–ಹರಿಯಾಣದ ಶಂಭು ಗಡಿಯಲ್ಲಿ ಸೋಮವಾರ ಧರಣಿ ನಡೆಸಿದರು

   

–ಪಿಟಿಐ ಚಿತ್ರ

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಯಡಿ ಬೇಳೆಕಾಳು, ಗೋಧಿ, ಹತ್ತಿಯನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಖರೀದಿಸಲು ರೈತರ ಜೊತೆ ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವನ್ನು ಮೂವರು ಸಚಿವರ ಸಮಿತಿ ಪ್ರತಿಭಟನಾನಿರತ ರೈತರ ಮುಂದಿಟ್ಟಿದೆ.

ADVERTISEMENT

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷೆ ಇರಬೇಕು ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ಪ್ರತಿಭಟಿಸುತ್ತಿರುವ ರೈತರ ಪ್ರತಿನಿಧಿಗಳ ಜೊತೆ ಭಾನುವಾರ ಚರ್ಚಿಸಿದ ಸಚಿವರ ತಂಡ ಈ ಪ್ರಸ್ತಾಪವನ್ನು ಮುಂದಿಟ್ಟಿತು.

ಸಚಿವರ ಸಮಿತಿ ಮುಂದಿಟ್ಟಿರುವ ಪ್ರಸ್ತಾವವನ್ನು ಕುರಿತು ಮಂಗಳವಾರದವರೆಗೂ ರೈತರ ವಿವಿಧ ವೇದಿಕೆಗಳಲ್ಲಿ ಚರ್ಚಿಸಲಾಗುವುದು. ಆ ನಂತರವೇ ಮುಂದಿನ ನಡೆಯನ್ನು ಪ್ರಕಟಿಸಲಾಗುವುದು ಎಂದು ರೈತ ಮುಖಂಡರು ಪ್ರಕಟಿಸಿದರು. 

‘ಕೇಂದ್ರ ಸರ್ಕಾರದ ಪ್ರಸ್ತಾವದ ಹಿನ್ನೆಲೆಯಲ್ಲಿ ಸದ್ಯಕ್ಕೆ ‘ದೆಹಲಿ ಚಲೋ’ ಪ್ರತಿಭಟನೆ ತಡೆಹಿಡಿಯಲಾಗಿದೆ. ನಮ್ಮ ಬೇಡಿಕೆಗಳಿಗೆ ಪರಿಹಾರ ಸಿಗದಿದ್ದಲ್ಲಿ ಫೆಬ್ರುವರಿ 21ರ ಬೆಳಿಗ್ಗೆ 11 ಗಂಟೆಯಿಂದ ಮತ್ತೆ ಆರಂಭವಾಗಲಿದೆ’ ಎಂದೂ ಈ ಮುಖಂಡರು ಸ್ಪಷ್ಟಪಡಿಸಿದರು.

ಪ್ರತಿಭಟನೆ ಅಂತ್ಯಗೊಳಿಸುವ ನಿಟ್ಟಿನಲ್ಲಿ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌, ಕೃಷಿ ಸಚಿವ ಅರ್ಜುನ್‌ ಮುಂಡಾ, ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರೈತ ಮುಖಂಡರ ಜೊತೆಗೆ ಭಾನುವಾರ ನಾಲ್ಕನೇ ಸುತ್ತಿನ ಚರ್ಚೆ ನಡೆಸಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಅವರೂ ಸಭೆಯಲ್ಲಿದ್ದರು. ನಾಲ್ಕು ಗಂಟೆಗೂ ಹೆಚ್ಚು ಅವಧಿ ಸಭೆ ನಡೆಯಿತು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಗೋಯಲ್‌, ‘ಚರ್ಚೆ ವೇಳೆ ಕಾರ್ಯಸೂಚಿಗೆ ಹೊರತಾದ ಈ ಪ್ರಸ್ತಾವ ಮೂಡಿಬಂತು’ ಎಂದು ವಿವರಿಸಿದರು.

‘ನಾನು ಒಬ್ಬ ವಕೀಲನಾಗಿ ಸಭೆಯಲ್ಲಿ ಪಾಲ್ಗೊಂಡಿದ್ದೇನೆ. ಕೇಂದ್ರದ ಪ್ರಸ್ತಾವದ ಕುರಿತು ಭಾಗಿದಾರರೇ ಅಂತಿಮ ತೀರ್ಮಾನ ತೆಗೆದು ಕೊಳ್ಳಬೇಕು. ಪ್ರತಿಭಟನೆ ವೇಳೆ ಶಾಂತಿ ಕಾಯ್ದುಕೊಳ್ಳಬೇಕು’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಹೇಳಿದರು.

ಗೋಧಿಗೆ ಬದಲಾಗಿ ಬೇರೆ ಬೆಳೆಗಳ ಕೃಷಿಗೆ ಮುಂದಾಗುವ ಉದ್ದೇಶವಿದೆ. ಆದರೆ, ಕೃಷಿ ಉತ್ಪನ್ನಗಳ ಬೆಲೆ ಎಂಎಸ್‌ಪಿಗಿಂತಲೂ ಕುಸಿದಾಗ ನಷ್ಟ ಅನುಭವಿಸುವ ಭೀತಿ ಇದೆ ಎಂದು ಕೃಷಿಕರ ಪ್ರತಿನಿಧಿಗಳು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

ಎಂಎಸ್‌ಪಿಗೆ ಕಾಯ್ದೆಯ ರಕ್ಷೆ ನೀಡುವುದು, ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳ ಜಾರಿ, ಸಾಲಮನ್ನಾ ಕುರಿತ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ರೈತ ಮುಖಂಡ ಜಗಜೀತ್‌ ಸಿಂಗ್ ದಲ್ಲೇವಾಲ್ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಐದು ವರ್ಷದ ಒಪ್ಪಂದ ಕುರಿತ ಕೇಂದ್ರದ ಪ್ರಸ್ತಾಪದ ಬಗ್ಗೆ ರೈತರ ವೇದಿಕೆಗಳಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಸಾಲಮನ್ನಾ ಮತ್ತು ಇತರೆ ಬೇಡಿಕೆಗಳು ಬಾಕಿ ಉಳಿದಿವೆ. ಇವುಗಳಿಗೂ ಮಂಗಳವಾರದವರೆಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ರೈತ ಪ್ರತಿನಿಧಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ಸಾಧ್ಯತೆ ಕುರಿತ ಪ್ರಶ್ನೆಗೆ ಗೋಯಲ್, ‘ಕೃಷಿಕರು ಸಕಾರಾತ್ಮಕ ನಿರ್ಧಾರ ಕೈಗೊಂಡರೆ ಚರ್ಚೆ ಮುಂದುವರಿಯಲಿದೆ. ಅದಕ್ಕೆ ಮುನ್ನ ಅವರು ಪ್ರತಿಭಟನೆ ಕೈಬಿಡಬೇಕು’ ಎಂದು ಉತ್ತರಿಸಿದರು.

ಕೇಂದ್ರದ ಪ್ರಸ್ತಾವ ಎಸ್‌ಕೆಎಂ ತಿರಸ್ಕಾರ

ಚಂಡೀಗಢ (ಪಿಟಿಐ): ಕನಿಷ್ಠ ಬೆಂಬಲ ಬೆಲೆಯಲ್ಲಿ ಐದು ವರ್ಷ ಕೃಷಿ ಉತ್ಪನ್ನ ಖರೀದಿಸಲು ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವನ್ನು ಸಂಯುಕ್ತ ಕಿಸಾನ್ ಮೋರ್ಚಾ ತಿರಸ್ಕರಿಸಿದೆ.

‘ರೈತರ ಬೇಡಿಕೆ ಕುರಿತ ಗಮನವನ್ನು ಬೇರೆಡೆ ಸೆಳೆಯುವುದು ಕೇಂದ್ರದ ಪ್ರಸ್ತಾವದ ಉದ್ದೇಶ. ಎಂಎಸ್‌ಪಿಗೆ ಸಂಬಂಧಿಸಿದಂತೆ ಸ್ವಾಮಿನಾಥನ್ ವರದಿ ಶಿಫಾರಸು ಜಾರಿಗೊಳಿಸಬೇಕು ಎಂಬುದೇ ತನ್ನ ಬೇಡಿಕೆಯಾಗಿದೆ’ ಎಂದು ಎಸ್‌ಕೆಎಂ ಸ್ಪಷ್ಟಪಡಿಸಿದೆ.

‘ಎಂಎಸ್‌ಪಿಗೆ ಕಾನೂನು ರಕ್ಷೆ –ಬೇಡಿಕೆ ಕೈಬಿಟ್ಟಿಲ್ಲ’

ಚಂಡೀಗಢ (ಪಿಟಿಐ): ‘ಎಂಎಸ್‌ಪಿ ದರದಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವದ ಕುರಿತು ರೈತರ ವೇದಿಕೆಗಳಲ್ಲಿ ಚರ್ಚಿಸುತ್ತೇವೆ. ಆದರೆ ಎಂಎಸ್‌ಪಿಗೆ ಕಾನೂನಿನ ರಕ್ಷೆ ಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ‘ ಎಂದು ರೈತ ಮುಖಂಡರು ಪ್ರತಿಕ್ರಿಯಿಸಿದರು.

ಸಭೆಯ ಫಲಶ್ರುತಿ ಕುರಿತು ಶಂಭು ಗಡಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಕೃಷಿ ಮುಖಂಡ ಸರವನ್‌ ಸಿಂಗ್ ಪಂಧೇರ್ ಅವರು ಕೇಂದ್ರದ ಪ್ರಸ್ತಾಪ ಕುರಿತು ರೈತ ಮುಖಂಡರು ಚರ್ಚಿಸಲಿದ್ದಾರೆ ಎಂದರು. ಕಾನೂನಿನ ರಕ್ಷೆ ಬೇಕು ಎಂಬ ಬೇಡಿಕೆಯಿಂದ ರೈತರು ಹಿಂದೆ ಸರಿದಿಲ್ಲ ಹಿಂದೆ ಸರಿಯುವುದೂ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಮಾತುಗಳಲ್ಲಿ ಉತ್ತರಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 72 ವರ್ಷದ ರೈತ ಖನೌರಿ ಗಡಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು ಸ್ಥಳಕ್ಕೆ ಮುಖಂಡರು ಭೇಟಿ ನೀಡುವರು ಎಂದರು. ಈ ಹಿಂದೆ ಶಂಭೂ ಗಡಿಯಲ್ಲಿಯೂ ರೈತರೊಬ್ಬರು ಸತ್ತಿದ್ದರು.

ನಾಫೆಡ್‌ ಎನ್‌ಸಿಸಿಎಫ್‌ ಮೂಲಕ ಒಪ್ಪಂದ

ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್‌) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್‌) ಐದು ವರ್ಷ ಕನಿಷ್ಠ ಬೆಂಬಲ ಬೆಲೆಗೆ ಕೃಷಿ ಉತ್ಪನ್ನಗಳ ಖರೀದಿಗೆ ಕೃಷಿಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ. ರೈತ ಮುಖಂಡರೊಟ್ಟಿಗೆ ನಡೆಸಿದ ಸಭೆಯ ಫಲಶ್ರುತಿ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವ ಪಿಯೂಷ್‌ ಗೋಯಲ್‌ ಅವರು ಈ ವಿಷಯ ತಿಳಿಸಿದರು.

‘ಒಪ್ಪಂದದ ಪ್ರಕಾರ ಈ ಸಂಸ್ಥೆಗಳು ಕೃಷಿಕರಿಂದ ತೊಗರಿಬೇಳೆ ಉದ್ದಿನ ಮೇಳೆ ಮಸೂರ ಬೇಳೆ ಗೋಧಿ ಬೆಳೆಗಳನ್ನು ಖರೀದಿಸಲಿವೆ. ಖರೀದಿಸುವ ಪ್ರಮಾಣಕ್ಕೆ ಮಿತಿ ಇಲ್ಲ. ಖರೀದಿ ಪ್ರಕ್ರಿಯೆಗೆ ವೆಬ್‌ಸೈಟ್‌ ರೂಪಿಸಲಾಗುತ್ತದೆ’ ಎಂದೂ ಸಚಿವರು ವಿವರಿಸಿದರು. ಈ ಪ್ರಕ್ರಿಯೆಯು ಪಂಜಾಬ್ ಕೃಷಿಕರನ್ನು ರಕ್ಷಿಸುವುದರ ಜೊತೆಗೆ ಅಂತರ್ಜಲ ಮಟ್ಟ ವೃದ್ಧಿಗೂ ನೆರವಾಗಲಿದೆ. ಭೂಮಿಯನ್ನು ಬರಡು ಬಿಡುವ ಪರಿಸ್ಥಿತಿಯೂ ತಪ್ಪಲಿದೆ ಎಂದು ಗೋಯಲ್‌ ಅವರು ಅಭಿಪ್ರಾಯಪಟ್ಟರು.

‘ರೈತರ ಇತರೆ ಬೇಡಿಕೆಗಳು ನೀತಿಗಳಿಗೆ ಸಂಬಂಧಿಸಿದ್ದಾಗಿದೆ. ವಿಸ್ತೃತ ಆಳವಾದ ಚರ್ಚೆ ನಡೆಯದೇ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ಚುನಾವಣೆಯು ಹತ್ತಿರವಾಗುತ್ತಿದೆ. ಹೊಸ ಸರ್ಕಾರ ರಚನೆಯಾಗಲಿದೆ. ಇಂತಹ ವಿಷಯಗಳ ಕುರಿತು ಚರ್ಚೆ ಮುಂದುವರಿಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು. 

ರೈತರ ಪ್ರಮುಖ ಬೇಡಿಕೆಗಳು

* ಎಂಎಸ್‌ಪಿಗೆ ಕಾನೂನಿನ ರಕ್ಷೆ

* ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿ

* ಕೃಷಿ ಕೂಲಿಕಾರರಿಗೆ ಪಿಂಚಣಿ ಸೌಲಭ್ಯ

* ಕೃಷಿ ಸಾಲ ಮನ್ನಾ ಮಾಡಬೇಕು ವಿದ್ಯುತ್‌ ದರ ಏರಿಕೆ ಬೇಡ

* ಕೃಷಿಕರ ವಿರುದ್ಧದ ಪೊಲೀಸ್‌ ಪ್ರಕರಣಗಳ ರದ್ದತಿ

* 2021ರ ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ‘ನ್ಯಾಯ’ * 2020–21ರ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ

ಎಂಎಸ್‌ಪಿಗೆ ಕಾಯ್ದೆಯ ರಕ್ಷೆ ಅಗತ್ಯ. ಕೊಲಂಬಿಯಾ ಇತರೆಡೆಯಿಂದ ಬೇಳೆಕಾಳುಗಳ ಆಮದು ವಿಷಯವೂ ಚರ್ಚೆಯಾಯಿತು. ಕೃಷಿಕರಿಗೆ ಎಂಎಸ್‌ಪಿ ನೀಡಿದರೆ ಪಂಜಾಬ್‌ ಬೇಳೆಕಾಳುಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿ ಇರಲಿದೆ.
-ಭಗವಂತ ಮಾನ್‌, ಪಂಜಾಬ್‌ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.