ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸೇವಾ ಅಧಿಕಾರಿಗಳ ಕೇಡರ್ ಅನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೇಡರ್‌ನೊಂದಿಗೆ ವಿಲೀನಗೊಳಿಸುವ ಮಸೂದೆಯನ್ನು ಶನಿವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ಗೃಹ ಖಾತೆ ವ್ಯವಹಾರಗಳ ಸಚಿವ ಜಿ.ಕಿಶನ್ ರೆಡ್ಡಿ ಅವರು 'ಜಮ್ಮು ಮತ್ತು ಕಾಶ್ಮೀರ ಮರುರಚನೆ (ತಿದ್ದುಪಡಿ) ಮಸೂದೆ-2021' ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಲು ಸರ್ಕಾರ ಕೆಲಸ ಮಾಡುತ್ತಿದೆ‘ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ, ಕಣಿವೆ ರಾಜ್ಯದಲ್ಲಿ ಸುಮಾರು 170 ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು. ಈ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಬೇಕೆಂದು ಕಿಶನ್ ಲೋಕಸಭೆಯಲ್ಲಿ ಮನವಿ ಮಾಡಿದರು.
ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂ ಅಧೀರ್ ರಂಜನ್ ಚೌಧರಿ, ‘ಇದಕ್ಕಾಗಿ ಸುಗ್ರೀವಾಜ್ಞೆ ತರಬೇಕಾದ ಅಗತ್ಯವೇನಿತ್ತು‘ ಎಂದು ಪ್ರಶ್ನಿಸಿದರು.
‘ಈ ಸುಗ್ರೀವಾಜ್ಞೆಯನ್ನು ಸಾಮಾನ್ಯವಾಗಿ ತುರ್ತು ಪರಿಸ್ಥಿತಿಯಲ್ಲಿ ಅಥವಾ ತುರ್ತು ಪರಿಸ್ಥಿತಿಗೆ ಮುನ್ನ ಜಾರಿಗೆ ತರುತ್ತಿದ್ದರು. ಹೀಗೆ ನಿಯಮಿತವಾಗಿ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವುದು ಸಂಸತ್ತಿನಲ್ಲಿರುವ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ’ ಎಂದರು.
‘ಜಮ್ಮು ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ರದ್ದಾದ ನಂತರ, ನಮ್ಮ ಸರ್ಕಾರ ಅಲ್ಲಿ ಸ್ವರ್ಗವನ್ನೇ ಸೃಷ್ಟಿ ಮಾಡುತ್ತದೆ. ಉದ್ಯೋಗಗಳನ್ನು ಸೃಜಿಸುತ್ತದೆ ಎಂದೆಲ್ಲ ಜನರಲ್ಲಿ ಕನಸನ್ನು ಬಿತ್ತಿದ್ದಿರಿ ಎಂದು ಆರೋಪಿಸಿದರು. ಸರ್ಕಾರ ಯಾವುದೇ ಸಿದ್ಧತೆ ಇಲ್ಲದೇ 370ನೇ ವಿಧಿಯನ್ನು ರದ್ದುಗೊಳಿಸುವ ಕ್ರಮವನ್ನು ತೆಗೆದುಕೊಂಡಿತು ಎಂದು ಚೌಧರಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.