ADVERTISEMENT

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 10:41 IST
Last Updated 21 ಜೂನ್ 2019, 10:41 IST
   

ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಶುಕ್ರವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ 2019 ಮಸೂದೆಯನ್ನು ಮಂಡಿಸಿದ್ದು, ಇದು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಾಪಾಡಲು ಸಹಕರಿಸುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಮಸೂದೆಮಂಡನೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ವಿರೋಧದ ಮಧ್ಯೆಯೇ ಮಸೂದೆ ಮಂಡನೆ ಮಾಡಿದ ರವಿಶಂಕರ್ ಪ್ರಸಾದ್, ಇದು ಧರ್ಮವೊಂದರ ಸಮಸ್ಯೆ ಮಾತ್ರವಲ್ಲ,ಇದು ಮಹಿಳೆಯರ ರಕ್ಷಣೆಯ ವಿಷಯ ಎಂದು ಹೇಳಿದ್ದಾರೆ.

ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆಯೇ ಮಸೂದೆ ಮಂಡನೆ ಮಾಡಿದ್ದಕ್ಕೆ ವಿಪಕ್ಷಗಳು ಗದ್ದಲ ಸೃಷ್ಟಿಸಿ ವಿರೋಧ ವ್ಯಕ್ತ ಪಡಿಸಿವೆ.

ADVERTISEMENT

ತಾನು ತ್ರಿವಳಿ ತಲಾಖ್ ವಿರೋಧಿಸುತ್ತಿದ್ದು, ನಾಗರಿಕ ಅಪಚಾರವನ್ನು ಅಪರಾಧ ಕೃತ್ಯವಾಗಿಸಬಾರದು. ಎಲ್ಲ ಸಮುದಾಯದ ಮಹಿಳೆಯರಿಗೂ ಇದು ಅನ್ವಯಿಸುವಂತೆ ಮಾಡಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಈ ಮಸೂದೆ ನಿರ್ದಿಷ್ಟ ವರ್ಗದವರಿಗೆ ಸಂಬಂಧಿಸಿದ ಕಾನೂನು ಎಂದು ಹೇಳಿದ ತರೂರ್, ಗಂಡ ತೊರೆದು ಹೋಗುವ ಸಂಪ್ರದಾಯ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಅಲ್ಲ ಎಲ್ಲ ಸಮುದಾಯದಲ್ಲಿಯೂ ಇದೆ. ಹೀಗಿರುವಾಗ ಎಲ್ಲ ಮಹಿಳೆಯರ ರಕ್ಷಣೆಗಾಗಿ ಸಾರ್ವತ್ರಿಕ ಕಾನೂನು ಯಾಕೆ ಮಾಡುವುದಿಲ್ಲ ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.

ಬಿಜೆಪಿಗೆ ಈಗ ಮುಸ್ಲಿಂ ಮಹಿಳೆಯರ ಮೇಲೆ ಹೆಚ್ಚು ಪ್ರೀತಿ ಬಂದಿದೆ. ಆದರೆ ಇದೇ ಪಕ್ಷ ಕೇರಳದ ಶಬರಿಮಲೆಯಲ್ಲಿ ಹಿಂದೂ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದೆ. ಹೆಂಡತಿಯನ್ನು ತೊರೆದು ಹೋಗುವ ಮುಸ್ಲಿಂ ಗಂಡಸಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಅದೇ ತಪ್ಪು ಮಾಡಿದ ಮುಸ್ಲಿಮೇತರ ಗಂಡಸಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಮೂಲಕ ಈ ಮಸೂದೆ ಸಂವಿಧಾನದ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಒವೈಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.