ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ.
ಹೊಸ ಸಂಸತ್ ಕಟ್ಟಡದಲ್ಲಿ ಮೊದಲ ಮಸೂದೆಯಾಗಿ ಮಂಡನೆಯಾಗಿರುವ ಮಹಿಳಾ ಮೀಸಲಾತಿ ಮಸೂದೆಯು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲು ಅನುವು ಮಾಡಿಕೊಡುತ್ತದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ.
ಮಸೂದೆಗೆ ‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂದು ಹೆಸರಿಡಲಾಗಿದೆ. ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಗಳವಾರ ಮಂಡಿಸಿದರು. ಮಸೂದೆ ಕುರಿತು ಲೋಕಸಭೆಯಲ್ಲಿ ಬುಧವಾರ ಬೆಳಿಗ್ಗೆ 11ರಿಂದ ಸಂಜೆ 6ರ ವರೆಗೆ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಆರಂಭದಲ್ಲಿ ಮಾತನಾಡಲಿದ್ದಾರೆ. ಬುಧವಾರವೇ ಮಸೂದೆಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ರಾಜ್ಯಸಭೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಚರ್ಚೆಗಳು ನಡೆಯಲಿವೆ. ಹೊಸ ಸಂಸತ್ತಿನ ಕಟ್ಟಡದಲ್ಲಿ ಮಂಡಿಸಿದ ಮೊದಲ ಮಸೂದೆ ಇದಾಗಿದೆ.
ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಮಂಡಿಸಲಾಗಿತ್ತು. ಪಕ್ಷಗಳ ನಡುವೆ ಒಮ್ಮತದ ಕೊರತೆಯಿಂದಾಗಿ 27 ವರ್ಷಗಳಲ್ಲಿ ಅದಕ್ಕೆ ಅಂಗೀಕಾರ ಸಿಕ್ಕಿರಲಿಲ್ಲ. ಈಗ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡುವುದಾಗಿ ಬಹುತೇಕ ಪಕ್ಷಗಳು ಪ್ರಕಟಿಸಿವೆ. ಇದರಿಂದಾಗಿ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಗುವುದು ಬಹುತೇಕ ಖಚಿತ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟ ಸೋಮವಾರ ಮಸೂದೆಗೆ ಅನುಮೋದನೆ ನೀಡಿದೆ. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗಿಯಾಗಬೇಕೆಂದು ಸರ್ಕಾರ ಬಯಸುತ್ತದೆ ಎಂದುಹೇಳಿದರು.
ದೇಶದಲ್ಲಿ ಮಹಿಳೆಯರ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಜಗತ್ತು ಗುರುತಿಸಿದೆ. ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ವಿವಿಧ ವಲಯಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆಯನ್ನು ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು.
15 ವರ್ಷಗಳ ಅವಧಿಗೆ ಮಹಿಳಾ ಮೀಸಲಾತಿಯನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅದರಲ್ಲಿ, ಎಸ್‌ಸಿ/ಎಸ್‌ಟಿ ಮೀಸಲಾತಿ ಸಹ ಇರಲಿದೆ. ಕ್ಷೇತ್ರವಾರು ಮಹಿಳಾ ಮೀಸಲಾತಿ ವಿಂಗಡಣೆ ಪ್ರಕ್ರಿಯೆ ಮುಗಿದ ಬಳಿಕವೇ ಕಾನೂನು ಜಾರಿಗೆ ಬರಲಿದೆ.
ಆದರೆ, ಹೊಸದಾಗಿ ಜನಗಣತಿ ಮತ್ತು 543 ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ನಂತರವೇ ಶೇ 33 ಮೀಸಲಾತಿಯನ್ನು ಪರಿಚಯಿಸಲಾಗುವುದು ಎಂದು ಮಸೂದೆ ಹೇಳುತ್ತದೆ. ಹೀಗಾಗಿ, 2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.
ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯ ಪ್ರಮಾಣದಲ್ಲಿದೆ. ಆದರೆ, ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.
ಮಹಿಳೆಯರು ವಿಭಿನ್ನ ದೃಷ್ಟಿಕೋನಗಳನ್ನು ತರುತ್ತಾರೆ ಮತ್ತು ಶಾಸಕಾಂಗ ಚರ್ಚೆಗಳು ಹಾಗೂ ನಿರ್ಧಾರಗಳ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುತ್ತಾರೆ ಎಂದು ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ ಶೇ 15ರಷ್ಟಿದ್ದು, ವಿಧಾನಸಭೆಗಳಲ್ಲಿ ಮಹಿಳಾ ಶಾಸಕರ ಸಂಖ್ಯೆ ಶೇ 10ಕ್ಕಿಂತ ಕಡಿಮೆ ಇದೆ.
ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆಯ ಸ್ವರೂಪಕ್ಕೆ ಸಮಾಜವಾದಿ ಪಕ್ಷ ಹಾಗೂ ಆರ್‌ಜೆಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಪಕ್ಷಗಳ ವಿರೋಧದಿಂದಾಗಿ, ಮಸೂದೆಗೆ ಅಂಗೀಕಾರ ಸಿಕ್ಕಿರಲಿಲ್ಲ. ಆರ್‌ಜೆಡಿ ಹಾಗೂ ಸಮಾಜವಾದಿ ಪಕ್ಷ ಈಗ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿವೆ. ಪಂಚರಾಜ್ಯಗಳ ಹಾಗೂ ಲೋಕಸಭಾ ಚುನಾವಣೆಗೆ ಮುನ್ನ ಈ ಮೈತ್ರಿಕೂಟದ ಪಕ್ಷಗಳು ಮಹಿಳಾ ಮೀಸಲಾತಿ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಈ ಪಕ್ಷಗಳು ನಾರಿ ಶಕ್ತಿಯ ಬಿಸಿಗೆ ತುತ್ತಾಗಬೇಕು ಎಂಬುದು ಬಿಜೆಪಿಯ ತಂತ್ರ.
ಈಗಿನ ಮಸೂದೆಯನ್ನು ಬಹುತೇಕ ಪಕ್ಷಗಳು ಸ್ವಾಗತಿಸಿವೆ. ಆದರೆ, ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದವರಿಗೆ ಸಹ ಕೋಟಾ ನಿಗದಿಪಡಿಸಬೇಕು ಎಂದು ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷ ಒತ್ತಾಯಿಸಿವೆ. ಮಹಿಳಾ ಮೀಸಲಾತಿ ಮಸೂದೆ ತನ್ನದೇ ಕೂಸು ಎಂದು ಪದೇ ಪದೇ ಹೇಳುತ್ತಾ ಬಂದ ‘ಕೈ’ ಪಾಳಯವು, ಮಹಿಳಾ ಮೀಸಲಾತಿಯಲ್ಲಿ ಒಬಿಸಿಗಳಿಗೆ ಕೋಟಾ ನಿಗದಿಪಡಿಸಬೇಕು ಎಂದು ಪಟ್ಟು ಹಿಡಿಯುವ ಮೂಲಕ ತನ್ನ ರಣತಂತ್ರದಲ್ಲಿ ಬದಲಾವಣೆ ಮಾಡಿದೆ.
ಮಸೂದೆ ವಿಷಯದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ. ‘ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಕಾಂಗ್ರೆಸ್ ಯಾವತ್ತೂ ಗಂಭೀರವಾಗಿರಲಿಲ್ಲ. ಕಾಂಗ್ರೆಸ್ ನಾಯಕರದ್ದು ತೋರಿಕೆಗಷ್ಟೇ ಕಾಳಜಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದರು.
ಬಿಜೆಪಿ ತಂದಿರುವ ಮಹಿಳಾ ಮೀಸಲಾತಿ ಮಸೂದೆಯು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹಳ ಹಿಂದೆಯೇ ಜಾರಿಗೆ ತಂದಿರುವ ಮಹಿಳಾ ಮೀಸಲಾತಿಯಿಂದ ಸ್ಫೂರ್ತಿ ಪಡೆದಿದೆ ಎಂದು ಜೆಡಿಯು ಹೇಳಿಕೊಂಡಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೀವ್ ರಂಜನ್, ‘ಬಿಹಾರವು ದಾರಿ ತೋರಿಸುತ್ತದೆ ಎಂಬುದನ್ನು ಮಸೂದೆ ಸಾಬೀತುಪಡಿಸಿದೆ’ ಎಂದು ವ್ಯಾಖ್ಯಾನಿಸಿದರು.
‘ಬಿಹಾರದಲ್ಲಿ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡುವ ಮಸೂದೆಗೆ 2006ರಲ್ಲಿ ಅಂಗೀಕಾರ ಪಡೆಯಲಾಯಿತು. ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಿದ ಮೊದಲ ರಾಜ್ಯ ಬಿಹಾರ. ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ದಿಟ್ಟ ಹೆಜ್ಜೆ ಇಟ್ಟರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.