ADVERTISEMENT

22ರಿಂದ ಸಂಸತ್ ಅಧಿವೇಶನ: ಪ್ರಮುಖ 6 ಮಸೂದೆಗಳ ಮಂಡನೆಗೆ ಸರ್ಕಾರ ಸಿದ್ಧತೆ

ಪಿಟಿಐ
Published 19 ಜುಲೈ 2024, 13:04 IST
Last Updated 19 ಜುಲೈ 2024, 13:04 IST
ಸಂಸ‌ದ್ ಭವನ 
ಸಂಸ‌ದ್ ಭವನ    

ನವದೆಹಲಿ: ಸೋಮವಾರ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ 90 ವರ್ಷ ಹಳೆಯ ವೈಮಾನಿಕ ಕಾಯ್ದೆಗೆ ಬದಲು ಜಾರಿಗೆ ತರುವ 'ಭಾರತೀಯ ವಾಯುಯಾನ ಮಸೂದೆ’ ಸೇರಿ 6 ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ. 

ವೈಮಾನಿಕ ಕ್ಷೇತ್ರದಲ್ಲಿ ವಹಿವಾಟು ನಡೆಸಲು ಇರುವ ಕೆಲ ತೊಡಕುಗಳನ್ನು ನಿವಾರಿಸುವುದು ಈ ತಿದ್ದುಪಡಿ ಮಸೂದೆ ಮಂಡನೆಯ ಉದ್ದೇಶವಾಗಿದೆ.

ಜುಲೈ 22ರಂದು ಆರಂಭವಾಗುವ ಅಧಿವೇಶನ ಆಗಸ್ಟ್ 12ರವರೆಗೂ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 23ರಂದು ಬಜೆಟ್‌ ಮಂಡಿಸುವರು.

ADVERTISEMENT

ಇದರ ಜೊತೆಗೆ ಪ್ರಕೃತಿ ವಿಕೋಪ ನಿರ್ವಹಣೆ (ತಿದ್ದುಪಡಿ) ಮಸೂದೆಯನ್ನು ಮಂಡಿಸಿ, ಅನುಮೋದನೆ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಭಿನ್ನ ಪಾತ್ರ ವಹಿಸುತ್ತಿರುವ ಸಂಘಟನೆಗಳ ಜವಾಬ್ದಾರಿ ಕುರಿತಂತೆ ಹೆಚ್ಚಿನ ಖಚಿತತೆ ಇರುವಂತೆ ನೋಡಿಕೊಳ್ಳುವುದು ಮಸೂದೆಯ ಉದ್ದೇಶವಾಗಿದೆ.

ಕಾಫಿ (ಉತ್ತೇಜನ ಮತ್ತು ಅಭಿವೃದ್ಧಿ) ಮಸೂದೆ, ರಬ್ಬರ್ (ಉತ್ತೇಜನ ಮತ್ತು ಅಭಿವೃದ್ಧಿ) ಮಸೂದೆ ಮಂಡನೆಯಾಗಲಿರುವ ಇತರೆ ಎರಡು ಮಸೂದೆಗಳು.

ಸಮಿತಿ ರಚನೆ: ಸಂಸದೀಯ ಕಲಾಪದ ಕಾರ್ಯಸೂಚಿ ಅಂತಿಮಗೊಳಿಸುವ ಕಲಾಪ ಸಲಹಾ ಸಮಿತಿಯನ್ನು (ಬಿ‌ಎಸಿ) ಸ್ಪೀಕರ್ ಓಂ ಬಿರ್ಲಾ ರಚಿಸಿದ್ದಾರೆ.

ಸ್ಪೀಕರ್ ನೇತೃತ್ವದ ಸಮಿತಿಯಲ್ಲಿ ಸುದೀಪ್ ಬಂಡೋಪಾಧ್ಯಾಯ (ಟಿಎಂಸಿ), ಪಿ.ಪಿ.ಚೌಧರಿ, ನಿಶಿಕಾಂತ್ ದುಬೆ, ಸಂಜಯ್‌ ಜೈಸ್ವಾಲ್, ಭಾತ್ರುಹರಿ ಮಹತಾಬ್, ಬೈಜಯಂತ್ ಪಾಂಡಾ, ಅನುರಾಗ್‌ ಠಾಕೂರ್ (ಬಿಜೆಪಿ), ಲಾವು ಶ್ರೀ ಕೃಷ್ಣ ದೇವರಾಯಲು (ಟಿಡಿಪಿ), ಗೌರವ್ ಗೊಗೋಯಿ, ಕೋಡಿಕುನ್ಹಿಲ್ ಸುರೇಶ್ (ಕಾಂಗ್ರೆಸ್‌), ದಿಲೇಶ್ವರ್ ಕಮೈಟ್ (ಜೆಡಿಯು), ದಯಾನಿಧಿ ಮಾರನ್ (ಡಿಎಂಕೆ), ಅರವಿಂದ್ ಸಾವಂತ್ (ಶಿವಸೇನಾ –ಯುಬಿಟಿ) ಹಾಗೂ ಲಾಲ್‌ಜೀ ವರ್ಮಾ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.