ADVERTISEMENT

ದೇಶದಾದ್ಯಂತ ವಾಹನಗಳಿಗೆ ಏಕರೂಪದ ‘ಪಿಯುಸಿ’ ಪ್ರಮಾಣ ಪತ್ರ: ಇಲ್ಲಿದೆ ಮಾಹಿತಿ

ಪಿಟಿಐ
Published 17 ಜೂನ್ 2021, 10:38 IST
Last Updated 17 ಜೂನ್ 2021, 10:38 IST
ವಾಹನಗಳ ಇಂಗಾಲ ಹೊರ ಸೂಸುವಿಕೆ ಪರೀಕ್ಷಾ ಕೇಂದ್ರಗಳ ಪ್ರಾತಿನಿಧಿಕ ಚಿತ್ರ (ಪ್ರಜಾವಾಣಿ ಚಿತ್ರ)
ವಾಹನಗಳ ಇಂಗಾಲ ಹೊರ ಸೂಸುವಿಕೆ ಪರೀಕ್ಷಾ ಕೇಂದ್ರಗಳ ಪ್ರಾತಿನಿಧಿಕ ಚಿತ್ರ (ಪ್ರಜಾವಾಣಿ ಚಿತ್ರ)    

ನವದೆಹಲಿ: ದೇಶದಾದ್ಯಂತ ಎಲ್ಲ ವಾಹನಗಳಿಗೆ ಏಕರೂಪ ಪಿಯುಸಿ (ಮಾಲಿನ್ಯನಿಯಂತ್ರಣ) ಪ್ರಮಾಣ ಪತ್ರ ನೀಡುವಂತೆ ಮತ್ತು ಅದರ ದತ್ತಾಂಶಗಳನ್ನು ‘ನ್ಯಾಷನಲ್‌ ರಿಜಿಸ್ಟರ್‌’ನಲ್ಲಿ ಸೇರಿಸುವಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಮೋಟಾರು ವಾಹನ ನಿಯಮ–1989ರ ನಿಯಮಗಳನ್ನು ಸಾರಿಗೆ ಸಚಿವಾಲಯವು ಬದಲಾಯಿಸಿದೆ. ಅದರಂತೆ ಪಿಯುಸಿ ಪ್ರಮಾಣ ಪತ್ರಗಳಿಗೆ ಕ್ಯೂಆರ್‌ ಕೋಡ್‌ ನೀಡಲಾಗುತ್ತದೆ. ಅದರಲ್ಲಿ ವಾಹನದ ಎಂಜಿನ್‌–ಚಾಸಿ ಸಂಖ್ಯೆ, ಮಾಲೀಕರ ಮೊಬೈಲ್‌ ಸಂಖ್ಯೆ, ವಿಳಾಸ ಮತ್ತು ವಾಹನದ ಇಂಗಾಲ ಹೊರಸೂಸುವಿಕೆಯ ಸ್ಥಿತಿಯ ವಿವರಗಳು ಇರಲಿವೆ.

‘ಕೇಂದ್ರ ಮೋಟಾರುವಾಹನ ನಿಯಮ–1989ರ ಅಡಿಯಲ್ಲಿ ದೇಶಾದ್ಯಂತ ಏಕರೂಪ ಪಿಯುಸಿ ಪ್ರಮಾಣಪತ್ರವನ್ನು ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜೂನ್ 14 ರಂದು ಅಧಿಸೂಚನೆ ಹೊರಡಿಸಿದೆ‘ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ಪಿಯುಸಿ ಪ್ರಮಾಣಪತ್ರದಲ್ಲಿ ವಾಹನ ಮಾಲೀಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಆ ಸಂಖ್ಯೆಗೆ ಪ್ರಮಾಣಪತ್ರದ ಸಿಂಧುತ್ವ ಮತ್ತು ಶುಲ್ಕದ ಕುರಿತು ಸಂದೇಶ ರವಾನಿಸಲಾಗುತ್ತದೆ,’ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

‘ಇಂಗಾಲ ಹೊರಸೂಸುವಿಕೆ ಪ್ರಮಾಣ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿದ್ದರೆ ಅಂಥ ವಾಹನಗಳ ಮಾಲೀಕರಿಗೆ ನಿರಾಕರಣ ಪತ್ರ ನೀಡಲಾಗುತ್ತದೆ. ಒಂದು ವೇಳೆ ವಾಹನವೂ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದು ಅಧಿಕಾರಿಗಳಿಗೆ ತಿಳಿದುಬಂದರೆ ಅವರು ವಾಹನದ ಪರೀಕ್ಷೆ ನಡೆಸಲು ಮಾಲೀಕರಿಗೆ ತಿಳಿಸಬಹುದು. ಪರೀಕ್ಷೆ ನಂತರವೂ ವಾಹನವು ಮಾನದಂಡಗಳಿಗೆ ಅನುಗುಣವಾಗಿ ಇಲ್ಲ ಎಂದು ಗೊತ್ತಾದರೆ ವಾಹನದ ಮಾಲೀಕ ಅಥವಾ ಸಂಬಂಧಿಸಿದವರಿಗೆ ದಂಢ ವಿಧಿಸಲಾಗುತ್ತದೆ. ಇದರ ಜಾರಿ ವ್ಯವಸ್ಥೆಯನ್ನು ತಂತ್ರಜ್ಞಾನದೊಂದಿಗೆ ಹೊಂದಿಸಲಾಗಿದೆ,‘ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಒಂದು ವೇಳೆ ವಾಹನಕ್ಕೆ ಪಿಯುಸಿ ಪ್ರಮಾಣ ಪತ್ರ ಪಡೆಯದೇ ಹೋದರೆ ಅಥವಾ ಪಿಯುಸಿ ಪ್ರಮಾಣ ಪತ್ರ ನೀಡಲಾಗದಂಥ ಸ್ಥಿತಿಯಲ್ಲಿ ವಾಹನವಿದ್ದರೆ, ಅದರ ನೋಂದಣಿ ಮತ್ತು ಪರ್ಮಿಟ್‌ ಅನ್ನು ರದ್ದು ಮಾಡಲಾಗುತ್ತದೆ,’ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.