ADVERTISEMENT

ಟೈರ್‌ಗಳಲ್ಲಿ ನೈಟ್ರೋಜನ್‌ ಕಡ್ಡಾಯ?

ಟೈರ್‌ ತಯಾರಿಕೆಯಲ್ಲಿ ರಬ್ಬರ್‌ಗೆ ಸಿಲಿಕಾನ್‌ ಮಿಶ್ರಣ: ರಾಜ್ಯಸಭೆಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:00 IST
Last Updated 8 ಜುಲೈ 2019, 20:00 IST
   

ನವದೆಹಲಿ: ಟೈರ್‌ ತಯಾರಿಸುವಾಗ ರಬ್ಬರ್‌ಗೆ ಸಿಲಿಕಾನ್‌ ಬೆರೆಸುವುದು ಮತ್ತು ಟೈರ್‌ನಲ್ಲಿ ಗಾಳಿಯ ಬದಲಿಗೆ ನೈಟ್ರೋಜನ್‌ (ಸಾರಜನಕ) ಬಳಕೆ ಕಡ್ಡಾಯಗೊಳಿಸುವ ಚಿಂತನೆ ನಡೆದಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ರಾಜ್ಯಸಭೆಯಲ್ಲಿ ಸೋಮವಾರ ಹೇಳಿದರು.

‘ಟೈರ್‌ನೊಳಗೆ ನೈಟ್ರೋಜನ್ ಬಳಸಿದರೆ ಒತ್ತಡದಿಂದ ಟೈರ್ ಸಿಡಿಯುವ ಸಾಧ್ಯತೆಗಳು ಕಡಿಮೆ’ ಎಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದರು. ನೊಯ್ಡಾ–ಆಗ್ರಾ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿರುವ ಅಪಘಾತ ದುರದೃಷ್ಟಕರ. ಉತ್ತರಪ್ರದೇಶ ಸರ್ಕಾರ ಅಪಘಾತದ ಕಾರಣಗಳನ್ನು ಗುರುತಿಸಲು ಸಮಿತಿ ರಚಿಸಿದೆ ಎಂದರು.

ADVERTISEMENT

ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಟೈರ್‌ಗಳಲ್ಲಿ ಸಾರಜನಕ ಬಳಕೆಯಿಂದ ಇದನ್ನು ಕಡಿಮೆ ಮಾಡಬಹುದು. ಅಂತರರಾಷ್ಟ್ರೀಯ ಮಾನದಂಡಗಳ ಅನುಸಾರ ಟೈರ್‌ ತಯಾರಿಕೆಯಲ್ಲಿ ರಬ್ಬರ್‌ ಜತೆಗೆ ಸಿಲಿಕಾನ್‌ ಬೆರೆಸಲಾಗುತ್ತಿದೆ. ಟೈರ್‌ಗಳಲ್ಲಿ ಸಾರಜನಕ ಬಳಸಲಾಗುತ್ತಿದೆ. ಟೈರ್‌ಗಳಲ್ಲಿ ಸಾರಜನಕ ಇದ್ದರೆ ಒತ್ತಡ, ಅಧಿಕ ಉಷ್ಣಾಂಶದಲ್ಲಿ ಟೈರ್‌ ಸಿಡಿಯುವ ಸಾಧ್ಯತೆಗಳು ಕಡಿಮೆ ಎಂದು ವಿವರಿಸಿದರು.

₹ 14,000 ಕೋಟಿ ಪ್ರಸ್ತಾಪ: ಹೆದ್ದಾರಿಗಳಲ್ಲಿ ಅಪಘಾತಗಳ ಪ್ರಮಾಣವನ್ನು ಕುಗ್ಗಿಸಲು ಹಾಗೂ ಜನರ ಜೀವ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಟ್ಟು ₹14,000 ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ತಿಳಿಸಿದರು.

ಅಪಘಾತಗಳು ಹೆಚ್ಚಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ಅಪಘಾತಗಳ ಪ್ರಮಾಣ ಕುಗ್ಗುತ್ತಿದೆ. ಅಪಘಾತಗಳ ನಿಯಂತ್ರಣಕ್ಕೆ ಆಟೊಮೊಬೈಲ್‌ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಾಗಿದೆ ಎಂದರು.

ಯಮುನಾ ಎಕ್ಸ್‌ಪ್ರೆಸ್ ವೇ: ಉತ್ತರಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ ವೇ ಅನ್ನು ಅಲ್ಲಿನ ಸರ್ಕಾರವೇ ಅಭಿವೃದ್ಧಿಪಡಿಸಿದೆ. ಅದಕ್ಕೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಸಂಬಂಧವಿಲ್ಲ, ಅದರ ನಿರ್ವಹಣೆಯನ್ನು ಪ್ರಾಧಿಕಾರ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಿಮೆಂಟ್‌ ಕಾಂಕ್ರೀಟ್‌ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. 2016ರಲ್ಲಿ 133, 2017ರಲ್ಲಿ 146, 2108ರಲ್ಲಿ 11 ಜನರು ಸತ್ತಿದ್ದಾರೆ. ಅಪಘಾತ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಲ್ಲಿನ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದರು.

ಕುಶಲ ಚಾಲಕರ ಕೊರತೆ
ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮಸೂದೆಯು ಒಂದು ವರ್ಷದಿಂದ ಸಂಸತ್ತಿನಲ್ಲಿ ಬಾಕಿ ಉಳಿದಿದೆ. ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದಕ್ಕೆ ಅಂಗೀಕಾರ ನೀಡಬೇಕು ಎಂದು ಸಚಿವ ನಿತಿನ್ ಗಡ್ಕರಿ ಮನವಿ ಮಾಡಿದರು.

ದೇಶದಲ್ಲಿ ವಾಹನ ಚಾಲನಾ ಪರವಾನಗಿಗಳ ಪೈಕಿ ಶೇ 30ರಷ್ಟು ನಕಲಿಯಾಗಿವೆ. ಅಲ್ಲದೆ, 25 ಲಕ್ಷದಷ್ಟು ಕೌಶಲಯುಕ್ತ ಚಾಲಕರ ಕೊರತೆಯಿದೆ. ಕೊರತೆ ನೀಗಿಸಲು ಚಾಲನಾ ತರಬೇತಿ ಸಂಸ್ಥೆ ಸ್ಥಾಪನೆಗೆ ಉತ್ತೇಜನ ನೀಡಲು ಸರ್ಕಾರ ಉದ್ದೇಶಿಸಿದೆ ಎಂದರು.ರಸ್ತೆ ಸುರಕ್ಷತಾ ನಿಯಮಗಳ ಜಾರಿ, ಸುರಕ್ಷಿತ ಚಾಲನೆಯನ್ನು ಕುರಿತಂತೆ ಜಾಗೃತಿಯನ್ನು ಮೂಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯಸಭೆಗೆ ತಿಳಿಸಿದರು. ಅಲ್ಲದೆ, ಪ್ರತಿ ಜಿಲ್ಲೆಯಲ್ಲಿ ಆಯಾ ಕ್ಷೇತ್ರದ ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸುರಕ್ಷತಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಗಡ್ಕರಿ ತಿಳಿಸಿದರು.

ಜಲಿಯನ್‌ವಾಲಾ ಬಾಗ್‌ ಮಸೂದೆ
‘ಜಲಿಯನ್‌ವಾಲಾ ಬಾಗ್‌ ಟ್ರಸ್ಟ್‌’ನಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರ ಶಾಶ್ವತ ಟ್ರಸ್ಟಿ ಸ್ಥಾನವನ್ನು ರದ್ದುಪಡಿಸಿ ಟ್ರಸ್ಟ್‌ ಅನ್ನು ‘ರಾಜಕೀಯದಿಂದ ಮುಕ್ತ’ಗೊಳಿಸುವ ಉದ್ದೇಶದ ‘ಜಲಿಯನ್‌ ವಾಲಾಬಾಗ್‌ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ’ಯನ್ನು ಸಂಸ್ಕೃತಿ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅವರು ಸೋಮವಾರ ಮಂಡಿಸಿದರು.

ಮಸೂದೆಯನ್ನು ವಿರೋಧಿಸಿದ ಶಶಿ ತರೂರ್‌, ‘ಇದು ದೇಶದ ಪರಂಪರೆಯನ್ನು ನಾಶಗೊಳಿಸುವ ಪ್ರಯತ್ನ. ಜಲಿಯನ್‌ವಾಲಾಬಾಗ್‌ ರಾಷ್ಟ್ರೀಯ ಸ್ಮಾರಕ. ದೇಶದ ಇತಿಹಾಸ ಹಾಗೂ ಪರಂಪರೆಯನ್ನು ಹಾಳುಗೆಡವುವುದು ಸರಿಯಲ್ಲ’ ಎಂದರು.

ತರೂರ್ ಅವರಿಗೆ ಉತ್ತರ ನೀಡಿದ ಸಚಿವ ಪಟೇಲ್‌, ‘ಕಳೆದ 40–50 ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷವು ಈ ಸ್ಮಾರಕ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ. ಮಸೂದೆಯನ್ನು ಕುರಿತು ಚರ್ಚೆ ನಡೆಯುವಾಗ ಆ ಬಗ್ಗೆ ನಾನು ಸಮಗ್ರ ಮಾಹಿತಿ ನೀಡುತ್ತೇನೆ’ ಎಂದರು. ನಿಯಮಾವಳಿಯ ಪ್ರಕಾರ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಈ ಟ್ರಸ್ಟ್‌ನ ಸದಸ್ಯರಾಗಿರುತ್ತಾರೆ. ಈಗ ‘ಲೋಕಸಭೆಯಲ್ಲಿ ಅತಿದೊಡ್ಡ ವಿರೋಧಪಕ್ಷದ ನಾಯಕ’ನನ್ನು ಟ್ರಸ್ಟ್‌ನ ಸದಸ್ಯನನ್ನಾಗಿಸುವ ಪ್ರಸ್ತಾಪವನ್ನೂ ಮಸೂದೆಯಲ್ಲಿ ಮಾಡಲಾಗಿದೆ.

ಆಧಾರ್‌ ತಿದ್ದುಪಡಿ ಮಸೂದೆ ಅಂಗೀಕಾರ
ಬ್ಯಾಂಕ್‌ ಖಾತೆ ತೆರೆಯಲು ಮತ್ತು ಮೊಬೈಲ್‌ ಫೋನ್ ಸಂಪರ್ಕ ಪಡೆಯಲು ಆಧಾರ್ ಅನ್ನು ಗುರುತುಪತ್ರವಾಗಿ ಬಳಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಂಸತ್ತು ಸೋಮವಾರ ಧ್ವನಿಮತದಿಂದ ಅಂಗೀಕರಿಸಿತು.

ಅನುಮೋದನೆ ಪಡೆದ ‘ಆಧಾರ್‌ ಮತ್ತು ಇತರೆ ಕಾಯ್ದೆ (ತಿದ್ದುಪಡಿ) ಮಸೂದೆ 2019’ ಅನ್ವಯ ಆಧಾರ್‌ ಮಾಹಿತಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಖಾಸಗಿ ಸಂಸ್ಥೆಗಳಿಗೆ ₹ 1 ಕೋಟಿ ದಂಡ, ಸಜೆ ವಿಧಿಸಲು ಅವಕಾಶ ಕಲ್ಪಿಸಲಿದೆ. ಮಸೂದೆಗೆ ಲೋಕಸಭೆ ಜುಲೈ 4ರಂದೇ ಅಂಗೀಕಾರ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.