ನವದೆಹಲಿ: ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಗರ್ಭಧಾರಣೆ ಮೇಲಿನ ಮಿತಿಯನ್ನು 20ರಿಂದ 24 ವಾರಗಳ ಅವಧಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಪರಿಷ್ಕೃತ ನಿಯಮವನ್ನು ರೂಪಿಸಿದೆ.
ಗರ್ಭಧಾರಣೆಯ ವೈದ್ಯಕೀಯ ತಿದ್ದುಪಡಿ ಕಾಯ್ದೆಯ (2021) ನಿಯಮಗಳ ಪ್ರಕಾರ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಬದುಕುಳಿದವರು, ಅಪ್ರಾಪ್ತ ವಯಸ್ಕರು ಮತ್ತು ತಮ್ಮ ವೈವಾಹಿಕ ಸ್ಥಿತಿಯಲ್ಲಿ ಬದಲಾವಣೆ ಹೊಂದುತ್ತಿರುವ (ವಿಚ್ಛೇದನ ಪಡೆದವರು, ವಿಧವೆ) ಗರ್ಭಾವಸ್ಥೆಯಲ್ಲಿನ ಮಹಿಳೆಯರು ಹಾಗೂ ದೈಹಿಕ ನ್ಯೂನತೆ ಹೊಂದಿರುವ ಮಹಿಳೆಯರಿಗೆ ಗರ್ಭಧಾರಣೆಯ 24ನೇ ವಾರದವರೆಗೆ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ.
ಈ ಹೊಸ ನಿಯಮವು ಮಾನಸಿಕ ಅಸ್ವಸ್ಥರಾಗಿರುವ ಮಹಿಳೆಯರು, ವಿರೂಪ ಹೊಂದಿರುವ ಭ್ರೂಣದಿಂದ ಗಣನೀಯ ಪ್ರಮಾಣದಲ್ಲಿ ಮಹಿಳೆಗೆ ಅಪಾಯವಿದೆ ಎನ್ನುವ ಸಂದರ್ಭ, ಒಂದು ವೇಳೆ ಜನಿಸಿದ ಮಗುವು ದೈಹಿಕ ಇಲ್ಲವೇ ಮಾನಸಿಕ ವೈಪರೀತ್ಯದಿಂದ ಗಂಭೀರ ಪ್ರಮಾಣದಲ್ಲಿ ವಿಕಲಚೇತನ ಹೊಂದುವ ಸಾಧ್ಯತೆ ಇದ್ದಲ್ಲಿ ಹಾಗೂ ಗರ್ಭಧರಿಸಿದ ಮಹಿಳೆಯ ಜೀವಕ್ಕೆ ಅಪಾಯವಿದೆ ಎನ್ನುವಂಥ ತುರ್ತುಪರಿಸ್ಥಿತಿಗೆ ಅನ್ವಯಿಸುತ್ತದೆ.
ಗರ್ಭಧಾರಣೆಯ ವೈದ್ಯಕೀಯ (ತಿದ್ದುಪಡಿ) ಕಾಯ್ದೆ–2021ಯ ಹೊಸ ನಿಯಮಗಳು ಮಾರ್ಚ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.