ನವದೆಹಲಿ:‘ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿನ ಅಕ್ರಮಗಳ ಬಗ್ಗೆ ದಾಖಲೆ ಕಲೆಹಾಕಲು ಯತ್ನಿಸಿದ್ದಕ್ಕೇ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ದೀರ್ಘ ರಜೆ ಮೇಲೆ ಕಳುಹಿಸಲಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ರಫೇಲ್ ಹತ್ತಿರ ಸುಳಿಯುವವರನ್ನೆಲ್ಲಾ ಮನೆಗೆ ಕಳುಹಿಸುತ್ತೇವೆ, ಮುಗಿಸುತ್ತೇವೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ’ ಎಂದು ರಾಹುಲ್ ಹೇಳಿದ್ದಾರೆ.
‘ರಫೇಲ್ ಖರೀದಿ ಒಪ್ಪಂದದಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು’ ಎಂದುಬಿಜೆಪಿಯ ಬಂಡಾಯ ನಾಯಕರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಿಬಿಐಗೆ ದೂರು ನೀಡಿದ್ದರು. ಈ ವಿಚಾರವಾಗಿ ಅಲೋಕ್ ವರ್ಮಾ ಅವರು ದೂರುದಾರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಇದಕ್ಕೆ ಕೇಂದ್ರ ಸಚಿವರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.‘ಸಿಬಿಐ ನಿರ್ದೇಶಕರು ದೂರುದಾರರನ್ನು ನೇರವಾಗಿ ಭೇಟಿ ಮಾಡುವಂತಿಲ್ಲ, ಅದರಲ್ಲೂ ದೂರುದಾರರು ರಾಜಕಾರಣಿಗಳಾಗಿದ್ದಲ್ಲಿ. ಈ ರೀತಿ ಆಗಿದ್ದು ಇದೇ ಮೊದಲು’ ಎಂದು ಸಚಿವರು ಹೇಳಿದ್ದರು.
ಈ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡೇ ವಿರೋಧ ಪಕ್ಷಗಳು ಮಂಗಳವಾರದ ತಡರಾತ್ರಿಯ ಬೆಳವಣಿಗೆಯನ್ನು ರಫೇಲ್ ಒಪ್ಪಂದದೊಂದಿಗೆ ತಳಕುಹಾಕುತ್ತಿವೆ.
ವಿರೋಧ ಪಕ್ಷಗಳ ಆರೋಪವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.
‘ಇದೊಂದು ತಲೆಬುಡವಿಲ್ಲದ ಆರೋಪ. ಮುಂದಿನ ದಿನಗಳಲ್ಲಿ ಸಿಬಿಐ ಯಾವ ತನಿಖೆ ನಡೆಸಲಿತ್ತು ಎಂಬುದು ಸರ್ಕಾರಕ್ಕೆ ಗೊತ್ತಿತ್ತು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿರಲಿಲ್ಲ ಎಂಬುದನ್ನು ಈ ಹೇಳಿಕೆಗಳೇ ಸೂಚಿಸುತ್ತವೆ. ಆ ಹೇಳಿಕೆಗಳನ್ನು ನಾನು ನಂಬುವುದಿಲ್ಲ. ಆದರೆ ಅವು ನಿಜವೇ ಆಗಿದ್ದಲ್ಲಿ, ಆ ಮಾಹಿತಿ ಇವರಿಗೆ ಗೊತ್ತಾದದ್ದು ಹೇಗೆ’ ಎಂದು ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಸಿಬಿಐ ಬಿಕ್ಕಟ್ಟಿಗೆ ಮೋದಿಯೇ ಕಾರಣ: ಖರ್ಗೆ
****
ಅಸ್ತಾನಾರನ್ನು ರಕ್ಷಿಸುವುದಲ್ಲದೇ, ರಫೇಲ್ ದೂರಿನ ಸಲುವಾಗಿ ನಮ್ಮನ್ನು ಭೇಟಿ ಮಾಡಿದ್ದೇ ಅಲೋಕ್ ವರ್ಮಾ ಅವರನ್ನು ರಜೆ ಮೇಲೆ ಕಳುಹಿಸಲು ಮತ್ತೊಂದು ಪ್ರಮುಖ ಕಾರಣವಿರಬೇಕು
- ಪ್ರಶಾಂತ್ ಭೂಷಣ್, ಹಿರಿಯ ವಕೀಲ
ಸಿಬಿಐ ಈಗ ಬಿಜೆಪಿ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಎಂದಾಗಿದೆ. ಅದನ್ನು ಇನ್ನು ಮುಂದೆ ಬಿಬಿಐ ಎಂದು ಕರೆಯಬೇಕಾಗುತ್ತದೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ
- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಕೇಂದ್ರ ಸರ್ಕಾರದ ಜಾತಿವಾದಿ, ಪ್ರತೀಕಾರ ಮತ್ತು ಕೋಮುವಾದಿ ನೀತಿಗಳು ಸಿಬಿಐ ಮಾತ್ರವಲ್ಲ, ದೇಶದ ಎಲ್ಲಾ ಸ್ವತಂತ್ರ ಸಂಸ್ಥೆಗಳನ್ನು ಅವನತಿಗೆ ದೂಡಿದೆ
- ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥ
ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ತನ್ನದೇ ಆಯ್ಕೆಯ ಅಧಿಕಾರಿಯನ್ನು ರಕ್ಷಿಸಲು ಸರ್ಕಾರವು ಸಿಬಿಐ ನಿರ್ದೇಶಕರನ್ನು ರಜೆ ಮೇಲೆ ಕಳುಹಿಸಿದೆ
- ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
ಲೋಕಪಾಲ ಕಾಯ್ದೆಯ ಅಡಿ ನೇಮಕವಾಗಿರುವ ಸಿಬಿಐ ನಿರ್ದೇಶಕರನ್ನು ಮನೆಗೆ ಕಳುಹಿಸಲು ಮೋದಿ ಸರ್ಕಾರಕ್ಕೆ ಅದ್ಯಾವ ಕಾನೂನು ಅಧಿಕಾರ ಕೊಟ್ಟಿದೆ?
- ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
ಮಿ.56 ಅವರು ಸಿಜೆಐ ಮತ್ತು ವಿಪಕ್ಷ ನಾಯಕನನ್ನು ಬದಿಗೊತ್ತಿ ಕ್ರಮ ತೆಗೆದುಕೊಂಡಿದ್ದಾರೆ. ಮಿ.ಮೋದಿ ನೀವು ರಫೇಲ್‌ನಿಂದ ದೂರ ಓಡಬಹುದಷ್ಟೇ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಇವನ್ನೂ ಓದಿ
*
ಇವನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.