ನವದೆಹಲಿ: ಹೆರಿಗೆ ರಜೆ ಪಡೆಯುವ ಉದ್ಯೋಗಿಗಳ ಏಳು ವಾರಗಳ ವೇತನದ ಮೊತ್ತವನ್ನು ಆಯಾ ಕಂಪನಿಗಳಿಗೆ ಸರ್ಕಾರವೇ ಪಾವತಿಸಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಗುರುವಾರ ಘೋಷಿಸಿದೆ.
₹15 ಸಾವಿರಕ್ಕಿಂತ ಹೆಚ್ಚು ವೇತನ ಹೊಂದಿರುವ ಮಹಿಳೆಯರು ಹೆರಿಗೆ ರಜೆ ತೆಗೆದುಕೊಂಡಲ್ಲಿ ಈ ಸೌಲಭ್ಯ ಅನ್ವಯವಾಗಲಿದೆ. ಒಟ್ಟು 26 ವಾರಗಳ ರಜೆಯ ಪೈಕಿ, ಏಳು ವಾರಗಳ ಮೊತ್ತವನ್ನು ಸರ್ಕಾರ ಪಾವತಿಸಲಿದೆ.ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೂ ಇದು ಅನ್ವಯವಾಗಲಿದೆ.
ಹೆರಿಗೆ ರಜೆಯ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಸಿದ ನಂತರ, ಹಲವು ಕಂಪನಿಗಳು ಗರ್ಭಿಣಿಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದ ಮತ್ತು ಕೆಲವು ಕಂಪನಿಗಳು ಮಹಿಳೆಯರನ್ನು ಕೆಲಸದಿಂದ ತೆಗೆದುಹಾಕಿದ ದೂರುಗಳು ಬಂದ ಹಿನ್ನೆಲೆಯಲ್ಲಿಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
‘ರಾಜ್ಯಸರ್ಕಾರಗಳ ಕಾರ್ಮಿಕ ಕಲ್ಯಾಣ ಇಲಾಖೆಗೆ ಕೇಂದ್ರವು ನೀಡುವ ಸೆಸ್‌ನ ಮೊತ್ತವನ್ನು ಈ ಉದ್ದೇಶಕ್ಕೆ ವಿನಿಯೋಗಿಸಲಾಗುವುದು’ ಎಂದು ಸಚಿವಾಲಯದ ಕಾರ್ಯದರ್ಶಿ ರಾಕೇಶ್ ಶ್ರೀವಾತ್ಸವ್ ಹೇಳಿದ್ದಾರೆ.
ಮಾರ್ಚ್ 2017ರವರೆಗೆ, ಈ ಸೆಸ್ ಅಡಿ ₹32,632 ಕೋಟಿ ನಿಧಿ ಇತ್ತು. ಆದರೆ, ಕಾರ್ಮಿಕ ಕಲ್ಯಾಣಕ್ಕೆ ₹7,500 ಕೋಟಿ ಮಾತ್ರ ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.