ADVERTISEMENT

ಜಿಲ್ಲಾ ಮಟ್ಟದಲ್ಲಿ ವಾಣಿಜ್ಯ ನ್ಯಾಯಾಲಯಗಳ ಸ್ಥಾಪನೆಗೆ ಪ್ರಸ್ತಾವ

ಕರಡು ಮಸೂದೆ ಸಿದ್ಧಪಡಿಸಿದ ಕಾನೂನು ಸಚಿವಾಲಯ

ಪಿಟಿಐ
Published 12 ನವೆಂಬರ್ 2024, 15:41 IST
Last Updated 12 ನವೆಂಬರ್ 2024, 15:41 IST
-
-   

ನವದೆಹಲಿ: ವಾಣಿಜ್ಯ ವ್ಯಾಜ್ಯಗಳ ವಿಚಾರಣೆಗೆಂದೇ ಮೀಸಲಾದ ವಾಣಿಜ್ಯ ನ್ಯಾಯಾಲಯಗಳನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲು ಕೇಂದ್ರ ಕಾನೂನು ಸಚಿವಾಲಯ ಉದ್ದೇಶಿಸಿದೆ.

ಈ ಉದ್ದೇಶಕ್ಕಾಗಿ ವಾಣಿಜ್ಯ ನ್ಯಾಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಲು ಸಚಿವಾಲಯ ಮುಂದಾಗಿದೆ. ಜಿಲ್ಲಾ ಮಟ್ಟದಲ್ಲಿ ವಾಣಿಜ್ಯ ನ್ಯಾಯಾಲಯಗಳ ಸ್ಥಾಪನೆ ಸೇರಿದಂತೆ ಹಲವು ಪ್ರಸ್ತಾವಗಳನ್ನು ಒಳಗೊಂಡ ಕರಡು ಮಸೂದೆಯೊಂದನ್ನು ಸಿದ್ಧಪಡಿಸಿದೆ.

ಉದ್ದೇಶಿತ ತಿದ್ದುಪಡಿಗಳ ಕುರಿತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ADVERTISEMENT

‘ವಾಣಿಜ್ಯ ವ್ಯಾಜ್ಯಗಳ ವಿಚಾರಣೆ ಹಾಗೂ ನ್ಯಾಯ ನಿರ್ಣಯ ತ್ವರಿತವಾಗಿ ನಡೆಯಬೇಕು. ಇದಕ್ಕಾಗಿ ಸದ್ಯ ಜಾರಿಯಲ್ಲಿರುವ ಕಾನೂನು ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಬೇಕು ಎಂಬ ಉದ್ದೇಶದಿಂದ ಈ ತಿದ್ದುಪಡಿ ತರಲಾಗುತ್ತಿದೆ’ ಎಂದು ಸಚಿವಾಲಯ ಹೇಳಿದೆ.

ಕಾಯ್ದೆಯ ಸೆಕ್ಷನ್ 3ರ ಸಬ್‌ ಸೆಕ್ಷನ್ 1ರಂತೆ, ರಾಜ್ಯ ಸರ್ಕಾರವು ಅಗತ್ಯ ಕಂಡುಬಂದಲ್ಲಿ, ಹೈಕೋರ್ಟ್‌ ಜೊತೆ ಸಮಾಲೋಚನೆ ಬಳಿಕ ಜಿಲ್ಲೆಗಳಲ್ಲಿ ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸಬಹುದಾಗಿದೆ. ಪ್ರಸ್ತಾವಿತ ತಿದ್ದುಪಡಿಯಂತೆ, ಹೈಕೋರ್ಟ್‌ ಜೊತೆ ಸಮಾಲೋಚನೆ ಬಳಿಕ, ವಾಣಿಜ್ಯ ವ್ಯಾಜ್ಯಗಳ ವಿಚಾರಣೆಗೆಂದೇ ಮೀಸಲಾದ ನ್ಯಾಯಾಲಯಗಳು ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ವಾಣಿಜ್ಯ ನ್ಯಾಯಾಲಯಗಳನ್ನು ರಾಜ್ಯಗಳು ಸ್ಥಾಪಿಸಬಹುದಾಗಿದೆ.

ವಾಣಿಜ್ಯ ನ್ಯಾಯಾಲಯಗಳ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೆಚ್ಚುವರಿಯಾಗಿ 30 ದಿನ ಅವಕಾಶ ನೀಡುವ ಪ್ರಸ್ತಾವ ಸೇರಿದಂತೆ ಹಲವಾರು ಅಂಶಗಳನ್ನು ಕರಡು ಮಸೂದೆ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.