ಮುಂಬೈ: ಮುಂಬೈ ಮೇಲಿನ 26/11ರ ಉಗ್ರರ ದಾಳಿಯ ನಂತರ ಭಾರತದ ವಾಯುಪಡೆಯುವ ಪಾಕಿಸ್ತಾನದ ಮೇಲೆ ಪ್ರತಿ ದಾಳಿನಡೆಸಲು ಸಿದ್ಧವಾಗಿತ್ತು. ಆದರೆ, ದಾಳಿಯ ಪ್ರಸ್ತಾವವನ್ನು ಅಂದಿನ ಕೇಂದ್ರ ಸರ್ಕಾರ ನಿರಾಕರಿಸಿತ್ತು ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬೀರೇಂದ್ರ ಸಿಂಗ್ ಧನೋವಾ ಅವರು ಹೇಳಿದ್ದಾರೆ.
ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಉಗ್ರರ ಅಡಗುದಾಣಗಳ ಬಗ್ಗೆ ಭಾರತಕ್ಕೆ ನಿಖರ ಮಾಹಿತಿ ಇತ್ತು. ದಾಳಿ ಮಾಡಲು ವಾಯುಪಡೆಯು ಸಕಲ ರೀತಿಯಿಂದಲೂ ಸಿದ್ಧವಾಗಿತ್ತು. ಆದರೆ, ಅನುಮತಿ ನಿರಾಕರಿಸಲಾಯಿತು. ದಾಳಿ ನಡೆಸಬೇಕೋ ಬೇಡವೋ ಎಂಬುದರ ಕುರಿತ ನಿರ್ಧಾರ ರಾಜಕೀಯ ಪ್ರೇರಿತವಾಗಿತ್ತು,’ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಯಾವತ್ತೂ ಅಪಪ್ರಚಾರದಲ್ಲಿಯೇ ತೊಡಗಿರುತ್ತದೆ. ಆದರೆ, ನಾವು ಸೇನೆಯ ಮೂಲಕ ಅವರನ್ನು ಎದುರಿಸುವ ಸಕಲ ಶಕ್ತಿಯನ್ನೂ ಹೊಂದಿದ್ದೆವು ಎಂಬುದನ್ನು ಅದು ಅರಿತುಕೊಳ್ಳಬೇಕು ಎಂದು ಧನೋವಾ ಈ ಹಿಂದೆಯೂ ಹೇಳಿದ್ದರು.
ಭಾರತದ ಎದುರು ಇರುವ ಬಹುದೊಡ್ಡ ಸವಾಲು ಎಂದರೆ ತನ್ನ ಸುತ್ತ ಇರುವಅಣುಬಾಂಬ್ ಹೊಂದಿರುವ (ಪಾಕಿಸ್ತಾನ, ಚೀನಾ)ಎರಡು ದೇಶಗಳನ್ನು ಎದುರಿಸುವುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅವರು, ‘ ಚೀನಾ ವಾಯು ಸೇನೆಯು ಅತ್ಯಾಧುನಿಕ ಅಸ್ತ್ರಗಳನ್ನು ಹೊಂದಿದೆ. ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ ಅದು ಪ್ರಬಲವಾಗಿದೆ. ಊಹೆಗೂ ನಿಲುಕದ ಯುದ್ಧ ವಿಮಾನಗಳು ಅವರ ಬಳಿ ಇವೆ,’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.