ನವದೆಹಲಿ: ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯ ನಂತರ, ಕೇಂದ್ರ ಸರ್ಕಾರವು ರಾಜಕೀಯ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳಂತಹ ಪ್ರಮುಖ ಸಂಪುಟ ಸಮಿತಿಗಳನ್ನು ಪುನರ್ ರಚನೆ ಮಾಡಿದ್ದು, ಸಂಪುಟಕ್ಕೆ ಸೇರಿರುವ ನೂತನ ಸಚಿವರನ್ನು ಹೊಸ ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಿಸಿ ಸೋಮವಾರ ರಾತ್ರಿ ಆದೇಶ ಹೊರಡಿಸಿದೆ.
ಪುನರ್ ರಚನೆಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಭೂಪೇಂದರ್ ಯಾದವ್ ಮತ್ತು ಸರ್ವಾನಂದ ಸೊನೊವಾಲ್‌ರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಕೇಂದ್ರ ಸಚಿವರಾದ ವೀರೇಂದ್ರ ಕುಮಾರ್, ಕಿರಣ್ ರಿಜಿಜು ಮತ್ತು ಅನುರಾಗ್ ಸಿಂಗ್ ಠಾಕೂರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ದೇಶದ ಭದ್ರತೆಯ ವಿಷಯದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ರಕ್ಷಣಾ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಸಮಿತಿಯಲ್ಲಿ ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ಇದ್ದಾರೆ. ದ್ವಿಸದಸ್ಯರನ್ನು ಒಳಗೊಂಡಿರುವ ನೇಮಕಾತಿ ಸಂಪುಟ ಸಮಿತಿಯಲ್ಲಿ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು ಸದಸ್ಯರಾಗಿರುತ್ತಾರೆ.
ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಸಚಿವರಾದ ನಾರಾಯಣ ರಾಣೆ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಶ್ವಿನಿ ವೈಷ್ಣವ್ ಅವರು ಪ್ರಧಾನ ಮಂತ್ರಿ ನೇತೃತ್ವದ ’ಹೂಡಿಕೆ ಮತ್ತು ಬೆಳವಣಿಗೆ’ ಸಂಪುಟ ಸಮಿತಿಯ ಸದಸ್ಯರಾಗಿದ್ದಾರೆ.
ಪ್ರಧಾನ ಮಂತ್ರಿ ನೇತೃತ್ವದ ಉದ್ಯೋಗ ಮತ್ತು ಕೌಶಲ ಸಂಪುಟ ಸಮಿತಿಯಲ್ಲಿ ಸಚಿವರಾದ ಅಶ್ವಿನಿ ವೈಷ್ಣವ್, ಭೂಪೇಂದ್ರ ಯಾದವ್, ರಾಮಚಂದ್ರ ಪ್ರಸಾದ್ ಸಿಂಗ್ ಮತ್ತು ಜಿ. ಕಿಶನ್ ರೆಡ್ಡಿ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.