ನವದೆಹಲಿ: ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಅಂಗವಿಕಲರಿಗೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರಡು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪಠ್ಯದಿಂದ ಧ್ವನಿ (ಟೆಕ್ಸ್ಟ್ ಟು ಸ್ಪೀಚ್) ಮತ್ತು ಬಳಕೆದಾರ ಸ್ನೇಹಿ ಪಿಕ್ಟೊಗ್ರಾಂ (ಚಿತ್ರ ಸಂಕೇತ) ತಂತ್ರಜ್ಞಾನಗಳನ್ನು ಅಳವಡಿಸುವ ಅಗತ್ಯತೆಯನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತಾವಿತ ಮಾರ್ಗಸೂಚಿಯ ಕುರಿತು ಸಾವರ್ಜನಿಕರು ಆಕ್ಷೇಪಣೆ ಮತ್ತು ಸಲಹೆಗಳನ್ನು ಜನವರಿ 29ರೊಳಗೆ ಸಲ್ಲಿಸಬಹುದು ಎಂದು ಅಂಗವಿಕಲರ ಸಬಲೀಕರಣ ಇಲಾಖೆ ಹೇಳಿದೆ.
ಅಂಗವಿಕಲರ ಬಳಕೆಗೆ ಅನುಕೂಲವಾಗುವ ವಿನ್ಯಾಸ ಹೊಂದಿರುವ ಮತ್ತು ಅವರಿಗಷ್ಟೇ ಮೀಸಲಾಗಿರುವ ವೆಬ್‌ಸೈಟ್‌ನ ಅಗತ್ಯವನ್ನೂ ಒತ್ತಿ ಹೇಳಲಾಗಿದೆ.
ಅಂಗವಿಕಲರಿಗೆ ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿರುವ ಸೌಲಭ್ಯಗಳನ್ನು ತಿಳಿಸುವ ವಿಶೇಷ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಲಾಗಿದೆ. ಬ್ರೈಲ್ ಲಿಪಿಯ ಸಂಕೇತಗಳನ್ನು ಎಲ್ಲಾ ರೈಲು ನಿಲ್ದಾಣಗಳಲ್ಲೂ ಅಳವಡಿಸುವ ಅಗತ್ಯ ಇದೆ ಎಂದಿದೆ.
ಟಿಕೆಟ್ ಕೌಂಟರ್‌ಗಳ ಎತ್ತರವನ್ನು ತಗ್ಗಿಸಬೇಕು, ರೈಲು ನಿಲ್ದಾಣದ ಆಗಮನ ಮತ್ತು ನಿರ್ಗಮನ ದ್ವಾರದ ಬಳಿ ಅಂಗವಿಲರಿಗೆ ಅನುಕೂಲವಾಗುವ ಸಲಕರಣೆಗಳನ್ನು ಇರಿಸಬೇಕು ಎಂದೂ ಕರಡು ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.