ನವದೆಹಲಿ: ಮಧ್ಯಸ್ಥಿಕೆ ಕಾನೂನಿನಲ್ಲಿ ಸುಧಾರಣೆಗಳನ್ನು ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಕಾನೂನು ಸಚಿವಾಲಯದ ಮಾಜಿ ಕಾರ್ಯದರ್ಶಿ ಟಿ.ಕೆ.ವಿಶ್ವನಾಥನ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದೆ.
ಸಮಿತಿಯು 30 ದಿನಗಳ ಒಳಗಾಗಿ ತನ್ನ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಲಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಅಂತರರಾಷ್ಟ್ರೀಯ ಮಧ್ಯಸ್ಥಿಕೆಗೆ ಸಂಬಂಧಿಸಿ ಭಾರತವನ್ನು ಕೇಂದ್ರವನ್ನಾಗಿ ಮಾಡುವುದು, ದೇಶದ ನ್ಯಾಯಾಲಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಸುಧಾರಣೆಗಳನ್ನು ತರುವ ಹಿಂದಿನ ಉದ್ದೇಶವಾಗಿದೆ.
ಸಂಧಾನ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪ ಕಡಿಮೆ ಮಾಡುವುದು, ಮಧ್ಯಸ್ಥಿಕೆ ಅವಕಾಶವನ್ನು ಬಳಸುವಂತೆ ಕಕ್ಷಿದಾರರನ್ನು ಪ್ರೇರೇಪಿಸುವುದು, ಕಾಲಮಿತಿಯಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಮಾಡುವ ಉದ್ದೇಶವೂ ಇದೆ ಎಂದು ಪ್ರಕಟಣೆ ತಿಳಿಸಿದೆ.
ಅಟಾರ್ನಿ ಜನರಲ್ ಎನ್.ವೆಂಕಟರಮಣಿ, ಕಾನೂನು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೀವ್ ಮಣಿ, ಕೆಲ ಹಿರಿಯ ವಕೀಲರು, ಖಾಸಗಿ ಕಾನೂನು ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ನೀತಿ ಆಯೋಗ, ಎನ್‌ಎಚ್‌ಎಐ, ರೈಲ್ವೆ, ಕೇಂದ್ರೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಸಮಿತಿಯಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.