ಚಂಡೀಗಢ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಒಲಿಂಪಿಕ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಭಾಗವಹಿಸಿ ಬೆಂಬಲ ಸೂಚಿಸಿದರು.
ಈ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದ ಫೋಗಟ್, ‘ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನಿಮ್ಮ ಬೇಡಿಗಳು ಕಾನೂನು ಬಾಹಿರವಲ್ಲ’ ಎಂದರು.
‘‘ಅವರನ್ನು(ರೈತರನ್ನು) ನೋಡಿ ತುಂಬಾ ನೋವಾಗುತ್ತಿದೆ. ಕೆಲವೊಮ್ಮೆ ಅವರಿಗಾಗಿ ಏನು ಮಾಡಲು ಸಾಧ್ಯವಾಗದೆ ನಾವು ಅಸಹಾಯಕರಾಗುತ್ತೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ನಾವು, ನಮ್ಮ ಕುಟುಂಬಕ್ಕಾಗಿ ಏನು ಮಾಡಲು ಸಾಧ್ಯವಾಗಲಿಲ್ಲ. ಸರ್ಕಾರ ರೈತರ ಮಾತನ್ನು ಆಲಿಸಬೇಕು’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘200 ದಿನಗಳು ಕಳೆದರೂ ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದ ಕಾರಣ ರೈತರು ರಸ್ತೆಯಲ್ಲೇ ಧರಣಿ ಕುಳಿತಿರುವುದು ಬೇಸರದ ಸಂಗತಿ’ ಎಂದರು.
‘ರೈತರು ನಮಗೆ ಆಹಾರ ನೀಡದಿದ್ದರೆ, ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಹೇಗೆ ಸಾಧ್ಯವಾಗುತ್ತದೆ? ಇಷ್ಟೆಲ್ಲ ನಡೆದರೂ ದೇಶವನ್ನು ಪೋಷಿಸುವುದನ್ನು ಅವರು ನಿಲ್ಲಿಸಲಿಲ್ಲ. ರೈತರದ್ದು ವಿಶಾಲ ಹೃದಯ. ಸರ್ಕಾರವು ಈ ವಿಷಯದಲ್ಲಿ ವಿಶಾಲ ಹೃದಯ ತೋರಿಸಬೇಕಿದೆ’ ಎಂದು ಹೇಳಿದರು.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ, ‘ರಾಜಕೀಯದ ಬಗ್ಗೆ ನನಗೆ ತಿಳಿದಿಲ್ಲ. ಅದರ ಬಗ್ಗೆ ಯಾವುದೇ ಜ್ಞಾನವೂ ಇಲ್ಲ’ ಎಂದರು.
ಪ್ಯಾರಿಸ್ ಒಲಂಪಿಕ್ಸ್‌ನ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಅನರ್ಹಗೊಂಡ ವಿನೇಶ್ ಫೋಗಟ್ ಅವರನ್ನು ಪ್ರತಿಭಟನಾನಿರತ ರೈತರು ಸನ್ಮಾನಿಸಿದರು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ‘ಸಂಯುಕ್ತ ಕಿಸಾನ್ ಮೋರ್ಚಾ’(ರಾಜಕೀಯೇತರ) ಮತ್ತು ‘ಕಿಸಾನ್ ಮಜ್ದೂರ್ ಮೋರ್ಚಾ’ ರೈತ ಸಂಘಟನೆಗಳು ಫೆ.13ರಂದು ‘ದೆಹಲಿ ಚಲೋ’ ಚಳವಳಿಗೆ ಕರೆ ನೀಡಿದ್ದು, ಇಂದಿಗೆ ಪ್ರತಿಭಟನೆ 200 ದಿನಗಳನ್ನು ಪೂರೈಸಿದೆ. ಈ ಸಂಬಂಧ ರೈತರು ‘ಕಿಸಾನ್ ಮಹಾಪಂಚಾಯತ್’ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.