ನವದೆಹಲಿ: ಉತ್ತರಾಖಂಡದಲ್ಲಿ ಸಂಭವಿಸಿರುವ ಹಿಮಪಾತದಿಂದ ಸಂಕಷ್ಟಕ್ಕೆ ಸಿಲುಕಿರುವವರ ಜನರ ಹೆಗಲಿಗೆ ಹೆಗಲುಕೊಟ್ಟು ಕೇಂದ್ರ ಸರ್ಕಾರ ನಿಲ್ಲಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ತಿಳಿಸಿದ್ದಾರೆ.
ಹಿಮಪಾತ ಸಂಭವಿಸಿದ ಬಗ್ಗೆ ತಿಳಿದ ಕೂಡಲೇ ಟ್ವೀಟ್ ಮಾಡಿರುವ ಸಚಿವರು,‘ಚಿಮೋಲಿ ಜಿಲ್ಲೆಯಲ್ಲಿ ಹಿಮಪಾತದಿಂದ ಉಂಟಾಗಿರುವ ಹಾನಿಯ ಬಗ್ಗೆ ಸಾಕಷ್ಟು ದೃಶ್ಯಾವಳಿಗಳನ್ನು ನೋಡಿದ್ದೇನೆ. ಇಂತಹ ಸಂಕಷ್ಟದ ಸಮಯದಲ್ಲಿ ಈ ದುರಂತದಿಂದ ತೊಂದರೆಗೊಳಗಾಗಿರುವ ಜನರ ಹೆಗಲಿಗೆ ಹೆಗಲುಕೊಟ್ಟು ನಾವು ನಿಲ್ಲಲಿದ್ದೇವೆ. ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಅವರು ಅಭಯ ನೀಡಿದ್ದಾರೆ.
ಮುಂದುವರಿದು, ‘ಚಮೋಲಿಯಲ್ಲಿ ಹಿಮನದಿ ಸ್ಫೋಟದಿಂದಾಗಿ ಅಮೂಲ್ಯವಾದ ಜೀವಗಳಿಗೆ ಹಾನಿಯಾಗಿರುವುದು ತುಂಬಾ ನೋವು ತಂದಿದೆ. ನನ್ನ ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಸಶಸ್ತ್ರ ಪಡೆಯ ಎರಡು ಹೆಲಿಕಾಪ್ಟರ್‌ಗಳು ಬರೇಲಿಯಿಂದ ಜೋಶಿಮಠಕ್ಕೆಗೆ ಧಾವಿಸಿವೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ನಡೆದ ರ‍್ಯಾಲಿ ವೇಳೆ ಹಿಮಪಾತದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಂತ್ರಸ್ತರಿಗೆ ಎಲ್ಲರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ದುರಂತದ ಸಮಯದಲ್ಲಿ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನೂ ನೀಡಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.