ADVERTISEMENT

ಅಪರಾಧ ಕಾನೂನುಗಳಿಗೆ ಹೊಸರೂ‍ಪ: ಐಪಿಸಿ, ಸಿಆರ್‌ಪಿಸಿ ಮಸೂದೆಗಳ ಮಂಡನೆ

ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳ ಬದಲಿಗೆ ನೂತನ ಮಸೂದೆಗಳ ಮಂಡನೆ

ಪಿಟಿಐ
Published 11 ಆಗಸ್ಟ್ 2023, 20:40 IST
Last Updated 11 ಆಗಸ್ಟ್ 2023, 20:40 IST
   

ನವದೆಹಲಿ (ಪಿಟಿಐ): ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದಿದ್ದ ಅಪರಾಧ ಕಾನೂನುಗಳಿಗೆ ಬದಲಾಗಿ ನೂತನ ಕಾನೂನುಗಳನ್ನು ಜಾರಿಗೆ ತರುವ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರವು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದೆ. ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಗುಂಪು ಹಲ್ಲೆ–ಹತ್ಯೆ
ಗಳಂತಹ ಕೃತ್ಯಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ಕೃತ್ಯಗಳಿಗೆ ಮರಣದಂಡನೆ ವಿಧಿಸಲೂ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಇಂಡಿಯನ್ ಪೀನಲ್‌ ಕೋಡ್‌ (ಭಾರತೀಯ ದಂಡ ಸಂಹಿತೆ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಮಸೂದೆ–2023, ಕ್ರಿಮಿನಲ್ ಪ್ರೊಸೀಜರ್ ಕೋಡ್‌ (ಅಪರಾಧ ಪ್ರಕ್ರಿಯಾ ಸಂಹಿತೆ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ–2023 ಮತ್ತು ಇಂಡಿಯನ್ ಎವಿಡನ್ಸ್‌ ಆ್ಯಕ್ಟ್‌ (ಭಾರತೀಯ ಸಾಕ್ಷ್ಯ ಕಾಯ್ದೆ) ಬದಲಿಗೆ ಭಾರತೀಯ ಸಾಕ್ಷ್ಯ ಮಸೂದೆ 2023 ಅನ್ನು ಕೇಂದ್ರ ಗೃಹ ಸಚಿವಾಲಯವು ಮಂಡಿಸಿದೆ. ಈಗ ಜಾರಿಯಲ್ಲಿರುವ ಮೂರೂ ಕಾಯ್ದೆಗಳಲ್ಲಿ 300ಕ್ಕೂ ಹೆಚ್ಚು ಬದಲಾವಣೆಗಳನ್ನು ನೂತನ ಮಸೂದೆಗಳಲ್ಲಿ ತರಲಾಗಿದೆ.

ಮಸೂದೆಗಳನ್ನು ಮಂಡಿಸಿದ ಗೃಹ ಸಚಿವ ಅಮಿತ್ ಶಾ, ‘ಬ್ರಿಟಿಷರ ಆಡಳಿತವನ್ನು ಗಟ್ಟಿಗೊಳಿಸಲು ಆ ಕಾನೂನುಗಳನ್ನು ರಚಿಸಲಾಗಿತ್ತು. ಆ ಕಾನೂನುಗಳನ್ನು ಈಗ ತೆಗೆದು ಹಾಕಲಾಗುತ್ತಿದೆ. ನೂತನ ಮಸೂದೆಗಳು ಜಾರಿಗೆ ಬಂದರೆ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಯಾಗಲಿದೆ. ಈಗಿನ ಅಗತ್ಯಗಳಿಗೆ ಅನುಗುಣವಾಗಿ ಈ ಕಾನೂನುಗಳಿಗೆ ಬದಲಾವಣೆ ತರಲಾಗಿದೆ. ಎಲ್ಲರಿಗೂ ತ್ವರಿತವಾಗಿ ನ್ಯಾಯ ಒದಗಿಸಲು ಅನುವು ಮಾಡಿಕೊಡಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಈ ಮಸೂದೆಗಳನ್ನು ಸಂಸದೀಯ
ಸಮಿತಿಯ ಪರಿಶೀಲನೆಗೆ ನೀಡಬೇಕು ಎಂದು ಅಮಿತ್ ಶಾ ಕೋರಿದರು. ಅದರಂತೆ ಮೂರೂ ಮಸೂದೆಗಳನ್ನು ಗೃಹ ವ್ಯವಹಾರಗಳ ಸಂಸದೀಯ ಸಮಿತಿ
ಗಳ ಪರಿಶೀಲನೆಗೆ ನೀಡಲಾಯಿತು.

ಸಮುದಾಯ ಸೇವೆ ಶಿಕ್ಷೆ: ಮಾನಹಾನಿ, ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದುರ್ನಡತೆ ತೋರುವುದು ಸೇರಿದಂತೆ ಇಂಥ ಅನೇಕ ಸಣ್ಣ ಸಣ್ಣ ಅಪರಾಧಗಳಿಗೆ ಸಮುದಾಯ ಸೇವೆ ಎನ್ನುವ ಹೊಸ ರೀತಿಯ ಶಿಕ್ಷೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆತ್ಮಹತ್ಯೆ ಯತ್ನ ಪ್ರಕರಣದಲ್ಲೂ ಸಮುದಾಯ ಸೇವೆ ಶಿಕ್ಷೆಯನ್ನು ಸೇರಿಸಲಾಗಿದೆ.

ಈ ಮೊದಲು ಸಣ್ಣ ಸಣ್ಣ ಅಪರಾಧಗಳಿಗೆ ಗಿಡ ನೆಡುವುದು, ಧಾರ್ಮಿಕ ಸ್ಥಳಗಳಲ್ಲಿ, ಅನಾಥಾಶ್ರಮಗಳಲ್ಲಿ ಸೇವೆ ಸಲ್ಲಿಸುವುದು, ಟ್ರಾಫಿಕ್‌ ಸಿಗ್ನಲ್ಸ್‌ ನಿರ್ವಹಿಸುವುದು ಸೇರಿ
ದಂತೆ ಕೆಲವು ಸಣ್ಣ ಪ್ರಮಾಣದ ಶಿಕ್ಷೆಗಳನ್ನು ನ್ಯಾಯಾಲಯ ನೀಡುತ್ತಿ
ದ್ದವು. ಈ ಎಲ್ಲಾ ಶಿಕ್ಷೆಗಳಿಗೆ ಒಂದು ಹೆಸರು ಇರಲಿಲ್ಲ. ಆದರೆ, ಈಗ ಈ ಶಿಕ್ಷೆಗಳಿಗೆ ‘ಸಮುದಾಯ ಸೇವೆ’ ಎನ್ನುವ ಹೆಸರು ನೀಡಲಾಗಿದೆ.

ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಐಪಿಸಿಯಲ್ಲಿ ಎರಡು ವರ್ಷಗಳ ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸುವ ಅವಕಾಶವಿದೆ. ಆದರೆ ಹೊಸ ಮಸೂದೆಯಲ್ಲಿ, ಮಾನಹಾನಿ
ಪ್ರಕರಣಕ್ಕೆ ಐಪಿಸಿಯಲ್ಲಿ ಹೇಳಿರುವ ಶಿಕ್ಷೆಯ ಪ್ರಮಾಣದ ಜೊತೆಯಲ್ಲಿ ಸಮುದಾಯ ಸೇವೆಯನ್ನು ಸೇರಿಸಲಾಗಿದೆ. ‘ಈವರೆಗೆ ಸಮುದಾಯ ಸೇವೆಯ ಶಿಕ್ಷೆ ನೀಡುವ ಪದ್ಧತಿ ಇತ್ತು. ಈಗ ಅದನ್ನು ಮಸೂದೆಯಲ್ಲಿಯೇ ಸೇರಿಸಲಾಗಿದೆ’ ಎಂದು ಅಮಿತ್ ಶಾ ಹೇಳಿದ್ದಾರೆ.

ಶಾ ಹೇಳಿದ ಪ್ರಮುಖ ಬದಲಾವಣೆಗಳು

  • l ಸಾಮೂಹಿಕ ಅತ್ಯಾಚಾರಕ್ಕೆ ಗರಿಷ್ಠ 20 ವರ್ಷಗಳ ಶಿಕ್ಷೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೆ, ಜೀವಿತಾವಧಿ ಶಿಕ್ಷೆ ಅಥವಾ ಮರಣದಂಡನೆ. ಪದೇ ಪದೇ ಅತ್ಯಾಚಾರ ಅಪರಾಧ ಎಸಗುವ ಆರೋಪಿಗೆ ಜೀವಿತಾವಧಿ ಶಿಕ್ಷೆ ಅಥವಾ ಮರಣದಂಡನೆ 

  • l ಝೀರೊ ಎಫ್‌ಐಆರ್‌ ದಾಖಲಿಸಿದ 15 ದಿನಗಳ ಒಳಗೆ ಸಂಬಂಧಿತ ಠಾಣೆಗೆ ದೂರನ್ನು ತಲುಪಿಸಬೇಕು. ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ, ಸಂತ್ರಸ್ತೆಯ ಹೇಳಿಕೆಯ ವಿಡಿಯೊ ದಾಖಲೀಕರಣವು ಕಡ್ಡಾಯ

  • l ಗುರುತು ಮರೆಮಾಚಿ ಮಹಿಳೆಯನ್ನು ಮದುವೆ ಆಗುವುದು ಅಪರಾಧ

  • l ಗುಂಪು ಹಲ್ಲೆ ಅಪರಾಧಕ್ಕೆ ಏಳು ವರ್ಷಗಳ ಶಿಕ್ಷೆ ಅಥವಾ ಜೀವಿತಾವಧಿ ಶಿಕ್ಷೆ ಅಥವಾ ಮರಣದಂಡನೆ

  • l ಆರೋಪಪಟ್ಟಿಯನ್ನು 90 ದಿನಗಳ ಒಳಗೆ ಸಲ್ಲಿಸಬೇಕು. ನ್ಯಾಯಾಲಯವು ಇನ್ನೂ 90 ದಿನಗಳವರಗೆ ಕಾಲಾವಕಾಶ ನೀಡಬಹುದು. ಪ್ರಕರಣದ ತನಿಖೆಯನ್ನು 180 ದಿನಗಳ ಒಳಗೆ ಮುಗಿಸಿ, ವಿಚಾರಣೆಗೆ ಕಳುಹಿಸಬೇಕು

  • l ಸರ್ಕಾರಿ ನೌಕರರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದಾದರೆ, ಇವರಿಗೆ ಸಂಬಂಧಿಸಿದ ಇಲಾಖೆಯು 120 ದಿನಗಳ ಒಳಗೆ ಅನುಮತಿ ನೀಡಬೇಕು ಇಲ್ಲವೇ ಅನುಮತಿಯನ್ನು ನಿರಾಕರಿಸಬಹುದು. 120 ದಿನಗಳ ಒಳಗೆ ಇಲಾಖೆಯಿಂದ ಪ್ರತಿಕ್ರಿಯೆ ಬರಲಿಲ್ಲ ಎಂದಾದರೆ, ಇಲಾಖೆಯು ಅನುಮತಿ ನೀಡಿದೆ ಎಂದೇ ಅರ್ಥ

  • l ಅಪರಾಧಿಯ ಆಸ್ತಿಯಿಂದಲೇ ಪರಿಹಾರ ನೀಡುವ ಅವಕಾಶ

  • l ಭಯೋತ್ಪಾನೆ ಅಂದರೇನು ಎನ್ನುವುದನ್ನು ಇದೇ ಮೊದಲ ಬಾರಿಗೆ
    ವ್ಯಾಖ್ಯಾನಿಸಲಾಗಿದೆ

  • l ಆರೋಪಿ ತಲೆಮರೆಸಿಕೊಂಡಿದ್ದರೂ ಆತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಅವಕಾಶ

  • l ವಿಡಿಯೊ ದಾಖಲೀಕರಣ ಮಾಡಿಕೊಂಡ ಮೇಲೆ ವಾಹನಗಳನ್ನು ಪ್ರಕರಣ ಮುಗಿಯುವವರೆಗೂ ಇರಿಸಿಕೊಳ್ಳುವ ಅಗತ್ಯ ಇಲ್ಲ

  • l ಮೂರು ವರ್ಷಗಳ ಒಳಗೆ ಪ್ರಕರಣಗಳು ಇತ್ಯರ್ಥವಾಗಬೇಕು

‘ದೇಶದ್ರೋಹ’ದ ಹೆಸರು ಬದಲು

ನೂತನ ಮಸೂದೆಯಲ್ಲಿ ‘ದೇಶದ್ರೋಹ’ ಕಾನೂನನ್ನು ತೆಗೆದುಹಾಕಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ಈ ಕಾನೂನಿನ ಸೆಕ್ಷನ್‌ ಸಂಖ್ಯೆ ಮತ್ತು ಹೆಸರನ್ನು ಬದಲಾಯಿಸಲಾಗಿದೆ. ಈ ಸೆಕ್ಷನ್‌ ಅಡಿ ಗುರುತಿಸಲಾದ ಕೃತ್ಯಗಳಿಗೆ ನೀಡಲಾಗುತ್ತಿದ್ದ ಶಿಕ್ಷೆಯನ್ನು ಹೆಚ್ಚಿಸಲಾಗಿದೆ. ಸರ್ಕಾರದ ವಿರುದ್ಧದ ಟೀಕೆ ಮತ್ತು ಆಗ್ರಹಗಳನ್ನೂ ಈ ಸೆಕ್ಷನ್‌ನ ವ್ಯಾಪ್ತಿಗೆ ತರಲು ಭಾರತೀಯ ನ್ಯಾಯ ಸಂಹಿತೆ ಅವಕಾಶ ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.