ನವದೆಹಲಿ: ವಕ್ಫ್ ಮಂಡಳಿಯ ಕಾರ್ಯದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಹಾಗೂ ಮಂಡಳಿಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರವು 1995ರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಕುರಿತ ಮಸೂದೆಯನ್ನು ಹಾಲಿ ಅಧಿವೇಶನದಲ್ಲಿ ಮಂಡನೆ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಸ್ಲಿಂ ಸಮುದಾಯದ ಒಳಗೇ ಈ ಕುರಿತಂತೆ ಬೇಡಿಕೆ ಇದ್ದ ಕಾರಣ ಈ ಹೆಜ್ಜೆ ಇಡಲಾಗಿದೆ ಎಂದು ಹೇಳಿವೆ.
‘ಪ್ರಸ್ತಾವಿತ ಮಸೂದೆ ಮೂಲಕ ಪ್ರಸ್ತುತ ಕಾಯ್ದೆಯಲ್ಲಿ 40ಕ್ಕೂ ಹೆಚ್ಚು ಬದಲಾವಣೆ ತರಲು ಉದ್ದೇಶಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ನ್ಯಾಯಮೂರ್ತಿ ಸಾಚಾರ್ ಆಯೋಗ ಮತ್ತು ಕೆ.ರೆಹಮಾನ್ ಖಾನ್ ಅವರ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಶಿಫಾರಸು ಮಾಡಿದ ಕಾರಣ ಸರ್ಕಾರವು ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಿವೆ.
‘ವಕ್ಫ್ ಮಂಡಳಿಗಳಿಂದ ಸರ್ಕಾರಕ್ಕೆ ವಾರ್ಷಿಕ ಅಂದಾಜು ₹200 ಕೋಟಿ ಆದಾಯ ಬರುತ್ತಿದೆ. ಆದರೆ ಮಂಡಳಿಗಳು ಹೊಂದಿರುವ ಆಸ್ತಿಗಳಿಗೂ ಅವುಗಳಿಂದ ಬರುತ್ತಿರುವ ಕಂದಾಯಕ್ಕೂ ತಾಳೆಯಾಗುತ್ತಿಲ್ಲ’ ಎಂದು ತಿಳಿಸಿವೆ.
‘ವಕ್ಫ್ ಮಂಡಳಿಯ ನಿರ್ಧಾರಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವಂತಿರಲಿಲ್ಲ. ತಿದ್ದುಪಡಿಯಿಂದ ಆ ಅಧಿಕಾರ ದೊರೆಯುತ್ತಿದೆ’ ಎಂದು ವ್ಯಕ್ತಿಯೊಬ್ಬರು ಹೇಳಿದರು.
ದೇಶದಲ್ಲಿ 30 ವಕ್ಫ್ ಮಂಡಳಿಗಳಿವೆ. ಮೊದಲಿಗೆ ಇವು ದೇಶದಾದ್ಯಂತ 52,000 ಆಸ್ತಿ–ಪಾಸ್ತಿಗಳನ್ನು ಹೊಂದಿದ್ದವು. 2009ರಲ್ಲಿ 4 ಲಕ್ಷ ಎಕರೆ ವ್ಯಾಪ್ತಿಯಲ್ಲಿ ವಕ್ಫ್‌ನ 3,00,000 ನೋಂದಾಯಿತ ಆಸ್ತಿ ಇತ್ತು. ಪ್ರಸ್ತುತ 8 ಲಕ್ಷಕ್ಕೂ ಅಧಿಕ ಎಕರೆ ವ್ಯಾಪ್ತಿಯಲ್ಲಿ 8,72,292 ಆಸ್ತಿ ಇದೆ.
ತಿದ್ದುಪಡಿ ಮಸೂದೆಯಲ್ಲಿರುವ ಪ್ರಮುಖ ಅಂಶಗಳು
*ಮಂಡಳಿಯ ಆಸ್ತಿ–ಪಾಸ್ತಿ ಕುರಿತು ಜಿಲ್ಲಾಧಿಕಾರಿಗಳ ಬಳಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು
*ವಕ್ಫ್ ಮಂಡಳಿಯು ‘ವಕ್ಫ್ ಆಸ್ತಿ’ ಎಂದು ಘೋಷಿಸುವ ಮುನ್ನ ಆಸ್ತಿಗಳ ಪರಿಶೀಲನೆ
*ವಕ್ಫ್ ಬಳಿ ಇರುವ ವಿವಾದಿತ ಭೂಮಿಗಳ ಪರಿಶೀಲನೆ. ಈ ಮೂಲಕ ಆಸ್ತಿ ವಿಚಾರದಲ್ಲಿ ಉಂಟಾಗಿರುವ ಅನಗತ್ಯ ವ್ಯಾಜ್ಯಗಳ ಪರಿಹಾರ
*ಮಂಡಳಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯಒಡೆದು ಆಳುವ ನೀತಿಯಲ್ಲಿ ಬಿಜೆಪಿ ನಂಬಿಕೆ ಇಟ್ಟಿದೆ. ವಕ್ಫ್ ಮಂಡಳಿಯನ್ನು ಬಲಪಡಿಸುವ ಬದಲಾಗಿ ಹಸ್ತಕ್ಷೇಪಕ್ಕೆ ಯತ್ನಿಸುತ್ತಿದೆ ಅಮರಾ ರಾಮ್ ಸಿಪಿಐ(ಎಂ) ಸಂಸದ
ಬಿಜೆಪಿಯು ಆರಂಭದಿಂದಲೂ ವಕ್ಫ್ ಮಂಡಳಿ ಮತ್ತು ಅದರ ಆಸ್ತಿ–ಪಾಸ್ತಿಗೆ ವಿರುದ್ಧವಾಗಿದೆ. ಇದರ ಹಿಂದೆ ಆರ್‌ಎಸ್‌ಎಸ್‌ನ ‘ಹಿಂದುತ್ವ ಅಜೆಂಡಾ’ ಇದೆಅಸಾದುದ್ದೀನ್ ಒವೈಸಿ ಎಐಎಂಐಎಂ ಮುಖ್ಯಸ್ಥ
ಹಿಂದೂ–ಮುಸ್ಲಿಂ ನಡುವೆ ಒಡಕು ಮೂಡಿಸುವುದೇ ಬಿಜೆಪಿ ಕೆಲಸ. ಅದು ಮುಸ್ಲಿಮರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದೆ. ನಾವು ಇದನ್ನು ವಿರೋಧಿಸುತ್ತೇವೆಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
ಬಿಜೆಪಿ ನೇತೃತ್ವದ ಸರ್ಕಾರವು ಬಜೆಟ್ ಮೇಲಿನ ಚರ್ಚೆಯಿಂದ ದೂರ ಸರಿಯುತ್ತಿದೆ. ಇದೇ ಕಾರಣದಿಂದ ‘ವಕ್ಫ್’ ವಿಷಯ ತೆಗೆದಿದೆಪ್ರಿಯಾಂಕಾ ಚತುರ್ವೇದಿ ಶಿವಸೇನಾ (ಉದ್ಧವ್ ಬಣ) ಸಂಸದೆ
ಒಡೆದು ಆಳುವ ನೀತಿಯಲ್ಲಿ ಬಿಜೆಪಿ ನಂಬಿಕೆ ಇಟ್ಟಿದೆ. ವಕ್ಫ್ ಮಂಡಳಿಯನ್ನು ಬಲಪಡಿಸುವ ಬದಲಾಗಿ ಹಸ್ತಕ್ಷೇಪಕ್ಕೆ ಯತ್ನಿಸುತ್ತಿದೆಅಮರಾ ರಾಮ್ ಸಿಪಿಐ(ಎಂ) ಸಂಸದ
ಮೋದಿ ಸರ್ಕಾರವು ಪಾರದರ್ಶಕವಾಗಿದೆ. ಹಗರಣಕೋರರು ಮಾತ್ರ ಪಾರದರ್ಶಕತೆಗೆ ವಿರೋಧ ವ್ಯಕ್ತಪಡಿಸುತ್ತಾರೆಸಂಜಯ್ ಜೈಸ್ವಾಲ್ ಬಿಜೆಪಿ ಸಂಸದ
ವಕ್ಫ್ ಮಂಡಳಿಯಲ್ಲಿ ಪಾರದರ್ಶಕತೆ ತರಬೇಕೆಂದು ಮತ್ತು ಬಡವರು ಮಹಿಳೆಯರು ಸಾಮಾನ್ಯ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸುದೀರ್ಘ ಕಾಲದಿಂದ ಬೇಡಿಕೆ ಇದೆ–ಕಿರಣ್ ರಿಜಿಜು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ
ವಿಪಕ್ಷಗಳಿಂದ ವಿರೋಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಮಾಜವನ್ನು ಒಡೆಯುವ ಉದ್ದೇಶದಿಂದ ವಕ್ಫ್ ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ವಿರೋಧ ಪಕ್ಷಗಳ ಹಲವು ನಾಯಕರು ಸೋಮವಾರ ಹೇಳಿದರು. ಈ ಮಧ್ಯೆ ಹಲವು ಬಿಜೆಪಿ ನಾಯಕರು ಸರ್ಕಾರದ ನಡೆಯನ್ನು ಸ್ವಾಗತಿಸಿ ಸಮರ್ಥಿಸಿಕೊಂಡಿದ್ದಾರೆ. ಮೋದಿ ಸರ್ಕಾರವು ಎಲ್ಲ ಹಂತದಲ್ಲೂ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಯ ಕಾನೂನು ಮಂಡಳಿಯು ‘ವಕ್ಫ್ ಮಂಡಳಿಗಳ ಅಧಿಕಾರ ಮತ್ತು ಹಕ್ಕುಗಳ ಮೇಲಿನ ಹಸ್ತಕ್ಷೇಪವನ್ನು ಸಹಿಸುವುದಿಲ್ಲ’ ಎಂದು ಹೇಳಿದೆ. ಮಸೂದೆಯನ್ನು ಸಂಪೂರ್ಣವಾಗಿ ವಿರೋಧಿಸುವಂತೆ ಎನ್‌ಡಿಎ ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳನ್ನು ಅದು ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.