ADVERTISEMENT

ಶೀಘ್ರದಲ್ಲೇ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ: ಅಮಿತ್ ಶಾ

ಪಿಟಿಐ
Published 7 ನವೆಂಬರ್ 2024, 13:01 IST
Last Updated 7 ನವೆಂಬರ್ 2024, 13:01 IST
<div class="paragraphs"><p>ನವದೆಹಲಿಯಲ್ಲಿ ಗುರುವಾರ ಆರಂಭವಾದ ‘ಭಯೋತ್ಪಾದನೆ ನಿಗ್ರಹ ಸಮಾವೇಶ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು</p></div>

ನವದೆಹಲಿಯಲ್ಲಿ ಗುರುವಾರ ಆರಂಭವಾದ ‘ಭಯೋತ್ಪಾದನೆ ನಿಗ್ರಹ ಸಮಾವೇಶ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು

   

  ಪಿಟಿಐ ಚಿತ್ರ

ನವದೆಹಲಿ: ಭಯೋತ್ಪಾದನೆಯನ್ನು ಮಟ್ಟಹಾಕುವ ಸಂಬಂಧ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ನೀತಿ’ ಹಾಗೂ ಕಾರ್ಯತಂತ್ರ ರೂಪಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ADVERTISEMENT

‘ಭಯೋತ್ಪಾದನೆ ನಿಗ್ರಹ ಸಮಾವೇಶ’ದಲ್ಲಿ ಮಾತನಾಡಿದ ಅವರು,‘ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ಸರ್ಕಾರ ಹೆಚ್ಚು ಕ್ರಿಯಾತ್ಮಕ ಹೆಜ್ಜೆಯನ್ನಿಡಲಿದೆ. ಮುಂದಿನ ಕೆಲವೇ ತಿಂಗಳಲ್ಲಿ ಈ ಹೊಸ ನೀತಿ ಮತ್ತು ಕಾರ್ಯತಂತ್ರವನ್ನು ಜಾರಿಗೊಳಿಸಲಾಗುವುದು’ ಎಂದರು.

‘ದೇಶವು ಭಯೋತ್ಪಾದನೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ದೃಢವಾದ ಕಾರ್ಯತಂತ್ರದೊಂದಿಗೆ ಹೆಜ್ಜೆ ಹಾಕುತ್ತಿದೆ. ಎಲ್ಲ ರಾಜ್ಯಗಳ ಹಾಗೂ ಕೇಂದ್ರೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಸಂಸ್ಥೆಗಳು ಜಂಟಿ ತಂತ್ರಗಳನ್ನು ರೂಪಿಸುವ ಜೊತೆಗೆ ತಮ್ಮಲ್ಲಿನ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವುದು ಅಗತ್ಯ’ ಎಂದು ಶಾ ಹೇಳಿದರು.

‘ಗೃಹ ಸಚಿವಾಲಯ ನೀತಿಗಳನ್ನು ರೂಪಿಸಿ, ಜಾರಿಗೊಳಿಸಬಹುದು. ರಾಜ್ಯಗಳು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಈ ವಿಚಾರದಲ್ಲಿ ಯಶಸ್ಸು ಸಿಗುವುದಿಲ್ಲ’ ಎಂದೂ ಹೇಳಿದರು.

ಎರಡು ದಿನಗಳ ಈ ಸಮಾವೇಶ ಶುಕ್ರವಾರ ಅಂತ್ಯಗೊಳ್ಳಲಿದೆ. ಭದ್ರತಾ ಪಡೆಗಳು, ತಂತ್ರಜ್ಞರು, ಕಾನೂನು ತಜ್ಞರು, ವಿಧಿವಿಜ್ಞಾನ ಪರಿಣತರು ಸೇರಿದಂತೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ಅಗತ್ಯ ಎಂಬುದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಭಾರತ ಕೂಡ ಈ ನಿಟ್ಟಿನಲ್ಲಿ ಬಲಿಷ್ಠ ಕಾರ್ಯತಂತ್ರ ಹೊಂದಿದೆ
ಅಮಿತ್‌ ಶಾ ಕೇಂದ್ರ ಗೃಹ ಸಚಿವ

ಶಾ ಭಾಷಣದ ಪ್ರಮುಖಾಂಶಗಳು

  • ಭಯೋತ್ಪಾದನೆ ವಿರುದ್ಧದ ಹೋರಾಟ ಪೊಲೀಸ್‌ ಠಾಣೆಗಳ ಹಂತದಿಂದ ಆರಂಭವಾಗಬೇಕು. ಈ ಸಂಬಂಧ ಎಲ್ಲ ರಾಜ್ಯಗಳ ಹಿರಿಯ ಪೊಲೀಸ್‌ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

  • ಭಯೋತ್ಪಾದನೆ ವಿರುದ್ಧ ಹೋರಾಡುವ ಸಂಸ್ಥೆಗಳಿಗೆ ಕಾನೂನಿನ ಬಲ ತುಂಬುವ ಉದ್ದೇಶದಿಂದ ಎನ್‌ಐಎ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಯುಎಪಿಎಗೂ ತಿದ್ದುಪಡಿ ತರಲಾಗಿದೆ/

  • ಭಯೋತ್ಪಾದಕರಿಗೆ ಹಣಕಾಸು ನೆರವು ಹರಿಯುವುದನ್ನು ತಡೆಯಲು 25 ಅಂಶಗಳ ಯೋಜನೆಯೊಂದನ್ನು ರೂಪಿಸಲಾಗಿದೆ.

  • ಕಾಯ್ದೆಗಳಿಗೆ ತಂದ ತಿದ್ದುಪಡಿಯಿಂದಾಗಿ ಘೋಷಿತ ಭಯೋತ್ಪಾದಕರು ಹಾಗೂ ಉಗ್ರ ಸಂಘಟನೆಗಳು ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ

  • ಸೈಬರ್‌ ಭದ್ರತೆ ನಾರ್ಕೊ ಭಯೋತ್ಪಾದನೆ ಮೇಲೆ ನಿಗಾ ಇಡುವುದಕ್ಕಾಗಿ ‘ಮಲ್ಟಿ ಏಜೆನ್ಸಿ ಸೆಂಟರ್‌’ (ಎಂಎಸಿ) ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳ (ಎಸ್‌ಒಪಿ) ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.