ನವದೆಹಲಿ: ದೇಶದಲ್ಲಿ ಮೂರು ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್ ಯೋಜನೆ ಜಾರಿಗೊಳಿಸಲಿದ್ದು, 40 ಸಾವಿರ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಿಗೆ ಸಮಾನವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಪ್ರಕಟಿಸಿದೆ.
ಮಧ್ಯಂತರ ಬಜೆಟ್‌ನಲ್ಲಿ ಈ ವಿಷಯ ತಿಳಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ‘ದೊಡ್ಡ ನಗರಗಳಲ್ಲಿ ಸಾರಿಗೆ ಸೌಲಭ್ಯ ಆಧರಿಸಿದ ಅಭಿವೃದ್ಧಿಗೆ ಪೂರಕವಾಗಿ ಮೂರು ಹಂತದ ಸಾರಿಗೆ ಸೇವೆಗೆ ಆದ್ಯತೆ ನೀಡಲಾಗುವುದು’ ಎಂದರು.
ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್, ಬಂದರು ಸಂಪರ್ಕ ಕಾರಿಡಾರ್, ಅತ್ಯಧಿತ ಸಂಚಾರ ದಟ್ಟಣೆ ಕಾರಿಡಾರ್ –ಕೇಂದ್ರ ಅಭಿವೃದ್ಧಿಗೆ ಚಿಂತನೆ ನಡೆಸಿರುವ ಕಾರಿಡಾರ್‌ಗಳು. ಬಹು ಹಂತದ ಸಂಪರ್ಕ ವ್ಯವಸ್ಥೆ ಸಾಕಾರಗೊಳಿಸಲು ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಇವುಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಕಾರಿಡಾರ್‌ಗಳ ನಿರ್ಮಾಣದಿಂದ ಸಾರಿಗೆ ದಟ್ಟಣೆ ತಗ್ಗಲಿದೆ, ಪ್ಯಾಸೆಂಜರ್ ರೈಲು ಸೇವೆ ಉತ್ತಮಗೊಳ್ಳಲಿದೆ. ಸರಕುಸಾಗಣೆ ಕಾರ್ಯದಕ್ಷತೆ ಹೆಚ್ಚಲಿದ್ದು, ವೆಚ್ಚ ತಗ್ಗಲಿದೆ ಎಂದರು. ಬೋಗಿಗಳ ಪರಿವರ್ತನೆಯಿಂದ ಪ್ರಯಾಣಿಕರಿಗೆ ಸುರಕ್ಷಿತ, ಅನುಕೂಲಕರ, ಆರಾಮದಾಯಕ ಸೇವೆಯನ್ನು ಒದಗಿಸುವುದು ಸಾಧ್ಯವಾಗಲಿದೆ ಎಂದು ವಿವರಿಸಿದರು.
ದೇಶದಲ್ಲಿ ಈಗ ಮಧ್ಯಮ ವರ್ಗವು ವಿಸ್ತರಣೆಯಾಗುತ್ತಿದೆ. ನಗರೀಕರಣ ಪ್ರಕ್ರಿಯೆಯು ಕ್ಷಿಪ್ರಗತಿಯಲ್ಲಿ ಆಗುತ್ತಿದೆ. ವಿವಿಧ ನಗರಗಳ ಮೆಟ್ರೊ ಸಾರಿಗೆಗಳಲ್ಲಿ ನಿತ್ಯ ಒಂದು ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಈಗ ದೇಶದ 20 ನಗರಗಳಲ್ಲಿ 895 ಕಿ.ಮೀ ಮೆಟ್ರೊ ಸಾರಿಗೆ ಸೌಲಭ್ಯವಿದೆ. 986 ಕಿ.ಮೀ. ಮಾರ್ಗ ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಿದರು.
ನಗರ ಪ್ರದೇಶಗಳಲ್ಲಿ ಕ್ಷಿಪ್ರ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಮೆಟ್ರೊ ರೈಲು ಮತ್ತು ನಮೊ ಭಾರತ್ ರೈಲು ಸೇವೆಗಳಿಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಹೆದ್ದಾರಿ ಪ್ರಾಧಿಕಾರಕ್ಕೆ ₹ 1.68 ಲಕ್ಷ ಕೋಟಿ
ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) 2024–25ನೇ ಹಣಕಾಸು ಸಾಲಿಗೆ ₹ 1.68 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷ ₹ 1.67 ಲಕ್ಷ ಕೋಟಿ ಹಂಚಿಕೆಯಾಗಿತ್ತು.
ಅಲ್ಲದೆ, ಈ ಆರ್ಥಿಕ ವರ್ಷದಲ್ಲಿ ಹೆದ್ದಾರಿ ವಲಯಕ್ಕೆ ₹ 2.78 ಲಕ್ಷ ಕೋಟಿ ಹಂಚಿಕೆಯಾಗಿದೆ. ಇದು, ಕಳೆದ ವರ್ಷ ₹ 2.76 ಲಕ್ಷ ಕೋಟಿ ಆಗಿತ್ತು.
ದೇಶದಲ್ಲಿ ಒಂಬತ್ತು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಶೇ 60ರಷ್ಟು ಪ್ರಗತಿಯಾಗಿದೆ. ಏಪ್ರಿಲ್ 2014ರಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿ 91,287 ಕಿ.ಮೀ ಇದ್ದರೆ, ಈಗ ಅದು 1.45 ಲಕ್ಷ ಕಿ.ಮೀ ಆಗಿದೆ. 2025ನೇ ಹಣಕಾಸು ವರ್ಷದಲ್ಲಿ ಇದನ್ನು 2 ಲಕ್ಷ ಕಿ.ಮೀ.ಗೆ ಏರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.