ನವದೆಹಲಿ: ‘ಸಂಸತ್‌ನಿಂದ ಅಮಾನತು ತಪ್ಪಿಸಿಕೊಳ್ಳಬೇಕೆಂದರೆ ವಿಪಕ್ಷಗಳ ಸಂಸದರು ಲೋಕಸಭೆಯಲ್ಲಿ ಅಸಂಸದೀಯ ಪದಗಳನ್ನು ಬಳಸಿದ ರಮೇಶ್ ಬಿಧೂರಿ, ಲೈಂಗಿಕ ಆರೋಪಗಳನ್ನು ಎದುರಿಸುತ್ತಿರುವ ಬ್ರಿಜ್ ಭೂಷಣ್‌ರಂತೆ ವರ್ತಿಸಬೇಕಾಗುತ್ತದೆ’ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್ ಲೇವಡಿ ಮಾಡಿದ್ದಾರೆ.
ವಿಪಕ್ಷಗಳ 146 ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಿರುವ ಕ್ರಮದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅವರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
‘ರಮೇಶ್ ಬಿಧೂರಿ ಮತ್ತು ಬ್ರಿಜ್ ಭೂಷಣ್ ಸಿಂಗ್‌ನಂತಹ ಇಬ್ಬರು ನಿಷ್ಕಳಂಕ, ಉತ್ತಮ ನಡತೆಯ ಸಂಸದರು ಲೋಕಸಭೆಯನ್ನು ಅಲಂಕರಿಸಿದ್ದಾರೆ. ಬಹುಶಃ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಿಂದ ಅಮಾನತುಗೊಳಿಸುವುದನ್ನು ತಪ್ಪಿಸಲು ವಿಪಕ್ಷಗಳ ಸಂಸದರು ಅವರಂತೆ(ಬಿಧೂರಿ, ಭೂಷಣ್) ವರ್ತಿಸಬೇಕೆಂದು ಬಯಸಬಹುದು’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಡಿಸೆಂಬರ್ 13ರಂದು ನಡೆದ ಲೋಕಸಭೆ ಭದ್ರತಾ ಲೋಪದ ಕುರಿತಂತೆ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ಘೋಷಣೆ ಕೂಗಿದ್ದರು. ಕಲಾಪಕ್ಕೆ ಅಡ್ಡಿಪಡಿಸಿದ ಕಾರಣ ನೀಡಿ ಸುಮಾರು 146 ಸಂಸದರನ್ನು ಅಮಾನತು ಮಾಡಲಾಗಿತ್ತು. ಇವರಲ್ಲಿ ಸಂಸದ ಡೆರೆಕ್ ಒಬ್ರಯಾನ್ ಕೂಡ ಒಬ್ಬರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.