ನವದೆಹಲಿ: ಸಂಸತ್ತಿನಲ್ಲಿ ಉಂಟಾದ ಭದ್ರತಾ ಲೋಪದ ವಿಚಾರವಾಗಿ ಸದನದಲ್ಲಿ ಪ್ರತಿಭಟಿಸಿದ ವಿರೋಧ ಪಕ್ಷಗಳ ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರ ಅಮಾನತು ವಿಚಾರವಾಗಿ ಎಕ್ಸ್ (ಟ್ವಿಟರ್)ನಲ್ಲಿ ಕಿಡಿಕಾರಿರುವ ಖರ್ಗೆ, 'ಮೊದಲು, ಆಗಂತುಕರು ಸಂಸತ್ತಿನ ಮೇಲೆ ದಾಳಿ ಮಾಡಿದರು. ಬಳಿಕ ಮೋದಿ ಸರ್ಕಾರ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ. ಮೋದಿ ನೇತೃತ್ವದ ಈ ನಿರಂಕುಶ ಸರ್ಕಾರ 47 ಸಂಸದರನ್ನು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವದ ಎಲ್ಲ ಶಿಷ್ಟಾಚಾರಗಳನ್ನು ಕಸದ ಬುಟ್ಟಿಗೆ ಎಸೆದಿದೆ' ಎಂದಿದ್ದಾರೆ.
'ಸರಳ ಮತ್ತು ಪ್ರಾಮಾಣಿಕವಾದ ಎರಡು ಬೇಡಿಕೆಗಳು ನಮ್ಮಲ್ಲಿವೆ. ಸಂಸತ್ತಿನಲ್ಲಿ ಉಂಟಾದ ಅಕ್ಷಮ್ಯ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗೃಹ ಸಚಿವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು. ಇದೇ ವಿಚಾರವಾಗಿ ವಿಸ್ತೃತ ಚರ್ಚೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪತ್ರಿಕೆಗೆ ಹಾಗೂ ಗೃಹ ಸಚಿವರು ಸುದ್ದಿ ವಾಹಿನಿಗೆ ಸಂದರ್ಶನ ನೀಡಬಹುದು. ಆದರೆ, ಭಾರತದ ಜನರನ್ನು ಪ್ರತಿನಿಧಿಸುವ ಸಂಸತ್ತಿನ ಬಗ್ಗೆ ಅವರು ಹೊಣೆಗಾರಿಕೆ ತೋರುತ್ತಿಲ್ಲ. 'ವಿರೋಧ ಪಕ್ಷಗಳ ಕಡಿಮೆ ಬಲವಿರುವ ಸಂಸತ್ತಿನಲ್ಲಿ ಮೋದಿ ಸರ್ಕಾರವು ಯಾವುದೇ ಚರ್ಚೆಗಳನ್ನು ನಡೆಸದೆ ಪ್ರಮುಖ ಕಾಯ್ದೆಗಳನ್ನು ಅಂಗೀಕರಿಸಬಹುದು, ಭಿನ್ನಾಭಿಪ್ರಾಯಗಳನ್ನು ಮೀರಿ ನಿಲ್ಲಬಹುದು' ಎಂದು ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ ದೂರಿದ್ದಾರೆ.
ಭದ್ರತಾ ಲೋಪದ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದ ವಿವಿಧ ಪಕ್ಷಗಳ 33 ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಇಂದು (ಸೋಮವಾರ) ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಟೀಕಾಪ್ರಹಾರ ನಡೆಸಿದ್ದಾರೆ.
14 ಸಂಸದರನ್ನು ಕಳೆದವಾರ ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.