ಬೆಂಗಳೂರು: ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವಣ ಬಿಕ್ಕಟ್ಟುತೀವ್ರ ಸ್ವರೂಪಕ್ಕೆ ತಲುಪಿದ್ದಾಗ ಊರ್ಜಿತ್ ಪಟೇಲ್ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ತಿಂಗಳುಗಳ ಹಿಂದೆಯೇ ಹರಡಿತ್ತು. ಆದರೆ, ಪ್ರಧಾನಿಮೋದಿಯವರು ಊರ್ಜಿತ್ ಪಟೇಲ್ ಭೇಟಿ ಮಾಡಿ ಚರ್ಚಿಸಿದ ನಂತರ ಈ ವಿಷಯ ತಣ್ಣಗಾಗಿತ್ತು.
ಆದಾಗ್ಯೂ, ತಾನು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಊರ್ಜಿತ್ ಹೇಳಿದ್ದರೂ, ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟು ಇದಕ್ಕೆ ಕಾರಣ ಎಂದೇ ಹೇಳಲಾಗುತ್ತಿದೆ.
ದೇಶದಲ್ಲಿ ಹಣ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದಂತೆ ಆರ್ಥಿಕ ನೀತಿಗಳನ್ನು ಮತ್ತಷ್ಟು ಪ್ರಬಲಗೊಳಿಸಿದ್ದು ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆಯಾಗಿರಲಿಲ್ಲಇಷ್ಟೊಂದು ಪ್ರಬಲ ಮಾಡುವುದು ಬೇಡ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಆರ್‌ಬಿಐ ಅದಕ್ಕೆ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ಬಿಕ್ಕಟ್ಟು ಉಂಟಾಗಿತ್ತು.
ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ಬಿಕ್ಕಟ್ಟು ನೆಹರು ಕಾಲದಿಂದಲೇ ಇತ್ತು!
ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಇದೇ ಮೊದಲೇನೂ ಅಲ್ಲ. ಭಾರತ ಬ್ರಿಟಿಷ್ ಆಡಳಿತದಲ್ಲಿದ್ದಾಗಲೇ ಇಂಥಾ ಬಿಕ್ಕಟ್ಟುಗಳು ತಲೆದೋರಿದ್ದವು.1937ರಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರವನ್ನು ವಿರೋಧಿಸಿ ರಿಸರ್ವ್ ಬ್ಯಾಂಕ್ ಗವರ್ನರ್ (ಆರ್‌ಬಿಐಯ ಮೊದಲ ಗವರ್ನರ್) ಸರ್ ಒಸ್ಬೋರ್ನ್ ಸ್ಮಿತ್ ರಾಜೀನಾಮೆ ನೀಡಿದ್ದರು.ಬಡ್ಡಿ ಮತ್ತು ಷೇರು ಮಾರುಕಟ್ಟೆ ವಿಷಯದಲ್ಲಿ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುತ್ತಿದೆ ಎಂದು ಪ್ರತಿಭಟಿಸಿ ಸ್ಮಿತ್ ಹೊರ ನಡೆದಿದ್ದರು.
ಆದರೆ ರಾಷ್ಟ್ರ ಮಟ್ಟದಲ್ಲಿ ಇಂಥದೊಂದು ರಾಜೀನಾಮೆ ವಿಷಯ ಚರ್ಚೆಗೀಡಾಗಿದ್ದು ಜವಾಹರ್ ಲಾಲ್ ನೆಹರೂ ಕಾಲದಲ್ಲಾಗಿತ್ತು.ರಿಸರ್ವ್ ಬ್ಯಾಂಕ್‍ನ ನಾಲ್ಕನೇ ಗವರ್ನರ್ ಆಗಿದ್ದ ಬೆನೆಗಲ್ ರಾಮ ರಾವ್, ಬ್ಯಾಂಕ್ ಕಾರ್ಯಗಳಲ್ಲಿ ಸರ್ಕಾರ ಮೂಗು ತೂರಿಸುತ್ತಿದೆ ಎಂದು ಹೇಳಿ ರಾಜೀನಾಮೆ ನೀಡಿದ್ದರು.ಹಣಕಾಸು ಸಚಿವಾಲಯದ ವಿರುದ್ಧ ಕಿಡಿ ಕಾರಿ 1975ರಲ್ಲಿ ರಾಮ ರಾವ್ ರಾಜೀನಾಮೆ ನೀಡಿದ್ದರು.
ನೆಹರೂ ಸರ್ಕಾರ ಆಗಿನ ವಿತ್ತ ಸಚಿವ ಟಿಟಿ ಕೃಷ್ಣಮಾಚಾರಿ ಪರ ವಹಿಸಿದ್ದಕ್ಕಾಗಿ ರಾಮ ರಾವ್ ಕಿಡಿ ಕಾರಿದ್ದರು. ರಿಸರ್ವ್ ಬ್ಯಾಂಕ್ ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆ ಅಲ್ಲ ಎಂದು ಟಿ.ಟಿ ಕೃಷ್ಣಮಾಚಾರಿಯವರ ನಿಲುವು ಆಗಿತ್ತು. ಕೃಷ್ಣಮಾಚಾರಿ ಅವರ ನಿಲುವನ್ನು ಬೆಂಬಲಿಸಿ ಅಂದು ರಾಮ ರಾವ್ ಅವರಿಗೆನೆಹರುಪತ್ರ ಬರೆದಿದ್ದರು.
ಸರ್ಕಾರಕ್ಕೆ ಸಲಹೆ ನೀಡುವಅಧಿಕಾರ ರಿಸರ್ವ್ ಬ್ಯಾಂಕ್‍ಗೆ ಇದೆ.ಆದರೆ ಸರ್ಕಾರ ಜತೆ ಹೊಂದಿಕೊಂಡು ಹೋಗಬೇಕು. ಸರ್ಕಾರದ ವಿರುದ್ಧ ರಿಸರ್ವ್ ಬ್ಯಾಂಕ್ ನಿಲುವು ತಾಳುವುದು ಸರಿಯಲ್ಲ. ಸರ್ಕಾರದ ಜತೆ ಹೊಂದಿಕೊಂಡು ಹೋಗಲು ಸಾಧ್ಯವಾಗದೇ ಇದ್ದರೆ ರಾಜೀನಾಮೆ ನೀಡಬಹುದು ಎಂದು ನೆಹರು ತಮ್ಮ ಪತ್ರದಲ್ಲಿ ಬರೆದಿದ್ದರು. ಇದಾದ ನಂತರ ಕೆಲವೇ ದಿನಗಳಲ್ಲಿ ರಾಮ ರಾವ್ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.