ADVERTISEMENT

ಅದಾನಿ Vs ಹಿಂಡನ್‌ಬರ್ಗ್‌ | ಶರದ್‌ ಪವಾರ್‌ ಭೇಟಿ ಮಾಡಿದ ಗೌತಮ್‌ ಅದಾನಿ

ಪಿಟಿಐ
Published 20 ಏಪ್ರಿಲ್ 2023, 10:32 IST
Last Updated 20 ಏಪ್ರಿಲ್ 2023, 10:32 IST
ಗೌತಮ್‌ ಅದಾನಿ ಮತ್ತು ಶರದ್‌ ಪವಾರ್‌
ಗೌತಮ್‌ ಅದಾನಿ ಮತ್ತು ಶರದ್‌ ಪವಾರ್‌   

ಮುಂಬೈ : ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್‌ ಮಾಡಿರುವ ಆರೋಪ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಮಂಡಳಿ (ಜೆಪಿಸಿ) ರಚಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವುದರ ನಡುವೆಯೇ ‘ಅದಾನಿ ಸಮೂಹ‘ದ ಅಧ್ಯಕ್ಷ ಗೌತಮ್‌ ಅದಾನಿ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ ಶರದ್‌ ಪವಾರ್‌ ನಿವಾಸಕ್ಕೆ ಭೇಟಿ ನೀಡಿದ ಗೌತಮ್‌ ಅದಾನಿ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಶರದ್‌ ಪವಾರ್‌ ಅದಾನಿ ಪರ ಮಾತನಾಡಿದ್ದರು. ಹಿಂಡನ್‌ಬರ್ಗ್‌ ವರದಿ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಪವಾರ್‌, ‘ಒಬ್ಬ ವ್ಯಕ್ತಿಯನ್ನು ಗುರಿ ಮಾಡಿಕೊಂಡು ವರದಿ ಬಿಡುಗಡೆ ಮಾಡಿದ ಹಾಗಿದೆ‘ ಎಂದು ಹೇಳಿದ್ದರು. ಶರದ್‌ ಹೇಳಿಕೆಯನ್ನು ಬಿಜೆಪಿ ಬೆಂಬಲಿಸಿದರೆ, ವಿರೋಧ ಪಕ್ಷಗಳು ಗೊಂದಲಕ್ಕೊಳಗಾಗಿದ್ದವು.

ADVERTISEMENT

‘ಅದಾನಿ ಗ್ರೂಪ್‌ ಮೇಲಿರುವ ತನಿಖೆಯನ್ನು ಸಂಸದೀಯ ಮಂಡಳಿಗೆ ವಹಿಸುವುದಕ್ಕಿಂತ ಸುಪ್ರೀಂಕೋರ್ಟ್‌ನ ಸಮಿತಿಗೆ ವಹಿಸುವುದು ಸೂಕ್ತ ಎಂದು ನನ್ನ ಅಭಿಪ್ರಾಯ. ಯಾಕೆಂದರೆ ಸಂಸತ್ತಿನ ಜಂಟಿ ಸಂಸದೀಯ ಮಂಡಳಿಯಲ್ಲಿರುವ ಹೆಚ್ಚಿನವರು ಬಿಜೆಪಿಯವರೇ ಆಗಿದ್ದಾರೆ. ಆದ್ದರಿಂದ ಸಂಸದೀಯ ಮಂಡಳಿ ತನಿಖೆ ನಡೆಸಿದರೆ ಅನುಮಾನಗಳು ಬರುವ ಸಾಧ್ಯತೆಯಿರುತ್ತದೆ. ಸುಪ್ರೀಂಕೋರ್ಟ್‌ ಸಮಿತಿ ತನಿಖೆ ನಡೆಸುವುದೇ ಸೂಕ್ತ‘ ಎಂದು ಪವಾರ್‌ ಹೇಳಿದ್ದರು.

ಅದಾನಿ ಸಮೂಹದ ಷೇರುಗಳ ಕುಸಿತ ಸೇರಿದಂತೆ ಷೇರು ಮಾರುಕಟ್ಟೆಗಳಿಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆರು ಸದಸ್ಯ ಸಮಿತಿಯನ್ನು ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.